ದರ್ಶನ್ ಫ್ಯಾನ್ಸ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ಪ್ರಥಮ್:  ಅಷ್ಟಕ್ಕೂ ನಡೆದದ್ದೇನು? - Mahanayaka

ದರ್ಶನ್ ಫ್ಯಾನ್ಸ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ಪ್ರಥಮ್:  ಅಷ್ಟಕ್ಕೂ ನಡೆದದ್ದೇನು?

darshan
19/06/2024


Provided by

ನಟ ದರ್ಶನ್ ಫ್ಯಾನ್ಸ್ ಬಗ್ಗೆ ಕೇವಲವಾಗಿ ಮಾತನಾಡಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ, ಇತ್ತೀಚೆಗೆ ನಟರಾಗಿ ಗುರುತಿಸಿಕೊಂಡಿರುವ ಪ್ರಥಮ್ ಇದೀಗ ದರ್ಶನ್ ಫ್ಯಾನ್ಸ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ನಟ ದರ್ಶನ್ ಬಂಧನದ ಹಿನ್ನೆಲೆ ಪೊಲೀಸ್ ಠಾಣೆ ಸಮೀಪ ಅಭಿಮಾನಿಗಳು ಜಮಾಯಿಸಿ, ದರ್ಶನ್ ಪರ ಘೋಷಣೆ ಕೂಗಿದ್ದರು. ಈ ವಿಚಾರಕ್ಕೆ ನಟ ಪ್ರಥಮ್ ನೀಡಿದ್ದ ಹೇಳಿಕೆ ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿತ್ತು.

ನನಗೆ ಯಾರಾದರೂ ಪೊಲೀಸ್ ಕಾನ್‌’ಸ್ಟೆಬಲ್ ಕೆಲಸ ಕೊಡಿಸಿ, ಕೈಯಲ್ಲಿ ಲಾಠಿ ಹಿಡಿದುಕೊಂಡು, ಅಲ್ಲಿದ್ದವರನ್ನೆಲ್ಲಾ ಚದುರಿಸುತ್ತೇನೆ ಎನ್ನುವಂತೆ ವೀರಾವೇಶದ ಹೇಳಿಕೆಯನ್ನು ಪ್ರಥಮ್ ನೀಡಿದ್ದರು. ಅಲ್ಲದೇ ದರ್ಶನ್ ಅಭಿಮಾನಿಗಳ ಬಗ್ಗೆ ಕೇವಲವಾಗಿ ಮಾತನಾಡಿದ್ದರು.  ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ನಟ ದರ್ಶನ್ ಅಭಿಮಾನಿ ಸಂಘದ ಪದಾಧಿಕಾರಿಗಳಂತೂ ಪ್ರಥಮ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಥಮ್ ಹೇಳಿಕೆಗೆ ವಿವಿಧ ಸಂದರ್ಶನಗಳಲ್ಲಿ ದರ್ಶನ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಇದೀಗ ದರ್ಶನ್ ಅಭಿಮಾನಿಗಳು ತನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರಥಮ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, “ಜೀವನ ಬಹಳ ದೊಡ್ಡದು, ಯಾರಿಗೋಸ್ಕರವೋ ನೀವು ಅದನ್ನು ಹಾಳು ಮಾಡಿಕೊಳ್ಳಬೇಡಿ. ನಾನು ತುಂಬಾ ಶಾಂತಿಯಿಂದಲೇ ಇದ್ದೆ. ನೀವು ಅತಿಯಾಗಿ ನಮ್ಮ ‘ಕರ್ನಾಟಕದ ಅಳಿಯ’ ಸಿನಿಮಾ ತಂಡದ ಆಫೀಸ್‌ ನಂಬರ್‌ಗೆ ಕಾಲ್ ಮಾಡಿ ಬೆದರಿಕೆ ಹಾಕುತ್ತಲೇ ಬಂದಿದ್ದೀರಿ. ಇನ್ಮೇಲೆ ನನಗೆ ಬರುವ ಕಾಲ್ ಮೆಸೇಜ್‌ಗಳನ್ನು ಅಥವಾ ಸಾಮಾಜಿಕ ಜಾಲತಾಣದಲ್ಲಿ ಬರುವ ವಾರ್ನಿಂಗ್ ಎಲ್ಲವನ್ನೂ ಕೂಡ ಪೋಲೀಸರು ನೋಡಿಕೊಳ್ಳುತ್ತಾರೆ ಎಂದು ಬರೆದುಕೊಂಡಿದ್ದಾರೆ.

ಪ್ರಥಮ್ ಹಾಕಿರುವ ಪೋಸ್ಟ್ ಗೆ ದರ್ಶನ್ ಅಭಿಮಾನಿಗಳು ಹಿಗ್ಗಾಮುಗ್ಗಾ ಝಾಡಿಸಿ ಕಾಮೆಂಟ್ ಹಾಕಿದ್ದಾರೆ.  ಲಾಠಿ ಹಿಡಿದುಕೊಂಡು ಸ್ಪಾಟ್ ಗೆ ಹೋಗಿ ದರ್ಶನ್ ಅಭಿಮಾನಿಗಳನ್ನು ಹೊಡೆದು ಓಡಿಸುತ್ತೇನೆ ಎಂದಿದ್ದವನು ಈಗ ಬರೇ ಕಾಲ್ ಗೆ ಹೆದರಿದ್ದೀಯಾ ಎಂದಿದ್ದಾರೆ.

ನೀನು ನಿನ್ನ ಕೆಲಸ ನೋಡಿಕೊಂಡಿದ್ರೆ ಸಾಕಿತ್ತು. ಮೈಕ್ ಸಿಕ್ಕಿತು ಅಂತ ಬಿಟ್ಟಿ ಉಪದೇಶ ನೀಡಿದ್ದೀಯ, ಬಿಗ್ ಬಾಸ್ ನಲ್ಲಿ ನೀನಿರುವಾಗ ಇದೇ ಅಂಧಾಭಿಮಾನಿಗಳು ನಿನಗೆ ಓಟ್ ಹಾಕಿದ್ದು ಎಂದು ಹಿಗ್ಗಾಮುಗ್ಗಾ ತರಾಟೆಗೆತ್ತಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ