ಶ್ರೀಲಂಕಾದಲ್ಲಿ ಪವನ ಶಕ್ತಿ ಯೋಜನೆ ವಾಪಸ್ ತೆಗೆಯಲು ಅದಾನಿ ನಿರ್ಧಾರ - Mahanayaka
6:18 PM Wednesday 17 - September 2025

ಶ್ರೀಲಂಕಾದಲ್ಲಿ ಪವನ ಶಕ್ತಿ ಯೋಜನೆ ವಾಪಸ್ ತೆಗೆಯಲು ಅದಾನಿ ನಿರ್ಧಾರ

14/02/2025

ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿ ಗೌತಮ್ ಅದಾನಿ ಶ್ರೀಲಂಕಾದಲ್ಲಿನ ತನ್ನ ಪವನ ಶಕ್ತಿ ಯೋಜನೆ ಮತ್ತು ಎರಡು ಪ್ರಸರಣ ಯೋಜನೆಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಸ್ಥಳೀಯರ ತೀವ್ರ ವಿರೋಧ ಮತ್ತು ಈ ಹಿಂದಿನ ಸರ್ಕಾರವು ಯೋಜನೆಗಳಿಗೆ ಹೇಗೆ ಅನುಮೋದನೆ ನೀಡಿತು ಎಂಬ ಪರಿಶೀಲನೆಯ ಬಳಿಕ ಈ ಬೆಳವಣಿಗೆ ನಡೆದಿದೆ.


Provided by

ಈ ಕ್ರಮವನ್ನು ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ರಿಗೆ ರಾಜಕೀಯ ವಿಜಯವೆಂದು ಪರಿಗಣಿಸಲಾಗಿದ್ದು, ಅವರು ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದರು.

ಅಧ್ಯಕ್ಷ ದಿಸಾನಾಯಕೆ ನೇತೃತ್ವದ ಶ್ರೀಲಂಕಾದ ಸಚಿವ ಸಂಪುಟವು ಅದಾನಿ ಗ್ರೂಪ್‌ನೊಂದಿಗಿನ ವಿದ್ಯುತ್ ಖರೀದಿ ಒಪ್ಪಂದವನ್ನು ರದ್ದುಗೊಳಿಸಲು ನಿರ್ಧರಿಸಿದೆ. ಸರ್ಕಾರವು ಒಪ್ಪಂದವನ್ನು ರದ್ದುಗೊಳಿಸಿದ್ದು, ಸಂಪೂರ್ಣ ಯೋಜನೆಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿದೆ ಎಂದು ಶ್ರೀಲಂಕಾದ ಇಂಧನ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಶ್ರೀಲಂಕಾದ ಮನ್ನಾರ್ ಮತ್ತು ಪೂನೆರಿನ್ ಕರಾವಳಿ ಪ್ರದೇಶಗಳಲ್ಲಿ 484 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಯೋಜಿಸಲಾದ ಪವನ ವಿದ್ಯುತ್ ಯೋಜನೆಗೆ ಮೇ 2024 ರಲ್ಲಿ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಆಡಳಿತದಲ್ಲಿ ಸಹಿ ಹಾಕಲಾಗಿತ್ತು.

ಕಳೆದ ವರ್ಷ ನವೆಂಬರ್‌ನಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತು ಇತರ ಏಳು ಜನರ ವಿರುದ್ಧ ಲಂಚದ ಆರೋಪದ ಮೇಲೆ ಅಮೆರಿಕದ ಇಲಾಖೆಯೊಂದು ದೋಷಾರೋಪಣೆ ಮಾಡಿತ್ತು. ಇದರ ನಂತರ, ಶ್ರೀಲಂಕಾದಲ್ಲಿ ಕಂಪನಿಯ ಕಾರ್ಯಾಚರಣೆಗಳನ್ನು ಪರಿಶೀಲಿಸಲಾಗುತ್ತಿತ್ತು. ಈ ವೇಳೆ ಅದಾನಿ ಗ್ರೂಪ್‌ನ ಪವನ ಶಕ್ತಿ ಯೋಜನೆಯ ಭ್ರಷ್ಟಾಚಾರ ಹೊರಬಂದಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ