ಗೂಗಲ್ ಟ್ರಾನ್ಸ್ ಲೇಟರ್ ಗೆ ತುಳು ಭಾಷೆ ಸೇರ್ಪಡೆ: ತುಳುವರ ತಾಯಿ ಭಾಷೆಗೆ ವಿಶ್ವ ಮನ್ನಣೆ

ಗೂಗಲ್, ಯೂಟ್ಯೂಬ್ ಹೀಗೆ ವಿವಿಧ ಸಾಮಾಜಿಕ ಜಾಲತಾಣಗಳಿಗೆ ನೀವು ದಿನಾಲೂ ಭೇಟಿ ಕೊಡುತ್ತೀರಾ. ನಿಮಗೆ ಕನ್ನಡ ಭಾಷೆಯ ಜೊತೆಗೆ ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಗೊತ್ತಿರಬಹುದು. ಆದರೆ ಇಂಗ್ಲೀಷ್ ಅಥವಾ ಬೇರೆ ಭಾಷೆ ಬಾರದಿದ್ರೂ ನೀವು ಗೂಗಲ್ ಟ್ರಾನ್ಸ್ ಲೇಟರ್ ಮೂಲಕ ಕನ್ನಡ ಭಾಷೆಯಲ್ಲಿ ಪದವನ್ನು ಬರೆದು ನಿಮಗೆ ಬೇಕಾದ ಭಾಷೆಗೆ ಅನುವಾದಿಸಿ ವ್ಯವಹಾರ ಮಾಡಿರಬಹುದು. ಆದರೆ ಇನ್ಮುಂದೆ ಕರಾವಳಿಗರು ತಮ್ಮ ಆಡುಭಾಷೆಯಲ್ಲೇ ಗೂಗಲ್ ಟ್ರಾನ್ಸ್ ಲೇಟ್ ಮಾಡಬಹುದು.
ಹೌದು…! ಕರಾವಳಿಯ ಜನರಿಗೆ ಅರ್ಥಾತ್ ತುಳು ಭಾಷಿಕರಿಗೆ, ತುಳುನಾಡಿನ ಜನರಿಗೆ ‘ಗೂಗಲ್ ಟ್ರಾನ್ಸ್ ಲೇಟರ್’ ಸಿಹಿಸುದ್ದಿ ನೀಡಿದೆ. ನೀವು ಈವರೆಗೆ ಯಾವ ಗೂಗಲ್ ಟ್ರಾನ್ಸ್ ಲೇಟರ್ ಮೂಲಕ ಬೇರೆ ಭಾಷೆಯನ್ನು ಅನುವಾದ ಮಾಡುತ್ತಿದ್ದೀರೋ ಅದೇ ಪ್ಲಾಟ್ ಫಾರಂಗೆ ತುಳು ಭಾಷೆ ಸೇರ್ಪಡೆಗೊಂಡಿದೆ. ಈ ಮೂಲಕ ವಿಶ್ವದ ಯಾವುದೇ ಮೂಲೆಯಲ್ಲಿ ಕೂತು ಯಾವುದೇ ಭಾಷಿಕನು ತುಳು ಭಾಷೆಗೆ ಅನುವಾದಿಸಿ ತುಳು ಕಲಿಯಬಹುದು.
ಜೊತೆಗೆ ತುಳು ಭಾಷಿಗರು ಇಂಗ್ಲೀಷ್ ಅಥವಾ ಇನ್ನಾವುದೇ ಪದ/ ಅರ್ಥಗಳನ್ನು ಗೂಗಲ್ ಟ್ರಾನ್ಸ್‌ಲೇಟರ್‌ನಲ್ಲಿ ನೇರವಾಗಿ ತುಳುವಿನಲ್ಲಿಯೇ ಪಡೆಯಬಹುದು. ಹೀಗೆ ಕರಾವಳಿಗರ ತುಳು ಭಾಷೆಯು ವಿಶ್ವಕ್ಕೆ ಪರಿಚಯಿಸಲ್ಪಟ್ಟಿದೆ.
ಇನ್ನು ಈ ಕುರಿತು ಪ್ರಕಟಣೆಯಲ್ಲಿ ಸಂತಸ ವ್ಯಕ್ತಪಡಿಸಿ ಹೇಳಿಕೆ ನೀಡಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ, ‘ಗೂಗಲ್ ಟ್ರಾನ್ಸೇಲಟರ್ ನಲ್ಲಿ ತುಳು ಭಾಷೆ ಸೇರ್ಪಡೆಗೊಂಡಿರುವುದು ತುಳು ಭಾಷೆಗೆ ಜಾಗತಿಕವಾಗಿ ಸಂದ ಗೌರವವಾಗಿದೆ. ಇದು ತುಳುವರು ಸಂಭ್ರಮಪಡುವಂತಹ ವ್ಚಾರವಾಗಿದೆ. ಆರಂಭದಲ್ಲಿ ಗೂಗಲ್ ಟ್ರಾನ್ಸೇಲಟರ್ ನಲ್ಲಿ ಕೆಲವು ಸಂದರ್ಭದಲ್ಲಿ ಶಬ್ದಗಳು ತಪ್ಪಾಗಿ ಉಲ್ಲೇಖವಾಗುವುದು ಸಾಮಾನ್ಯ ವಿಚಾರ. ಇಂತಹ ಸಂದರ್ಭಗಳಲ್ಲಿ ಅಲ್ಲೇ ಇರುವ ಫೀಡ್ ಬ್ಯಾಕ್ ಕಾಲಮ್ ನಲ್ಲಿ ಸರಿಯಾದ ಶಬ್ದವನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದರೆ ಗೂಗಲ್ ಅದನ್ನು ಮುಂದಕ್ಕೆ ಸರಿ ಮಾಡಿಕೊಳ್ಳುತ್ತದೆ. ಈ ಅಂಶವನ್ನು ತುಳುವರು ಸಮರ್ಪಕವಾಗಿ ಬಳಸಿಕೊಂಡರೆ ತುಳುವರಿಗೆ ಹಾಗೂ ತುಳುವೇತರರಿಗೂ ಪ್ರಯೋಜನವಾಗಲಿದೆ’ ಎಂದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97