ಆದಿದ್ರಾವಿಡರು ಉಪಜಾತಿ ‘ಗೊತ್ತಿಲ್ಲ’ ಎಂದು ನಮೂದಿಸಲು ಆದಿದ್ರಾವಿಡ ಸಮಾಜ ಸೇವಾ ಸಂಘ ಮನವಿ - Mahanayaka
11:59 PM Friday 12 - December 2025

ಆದಿದ್ರಾವಿಡರು ಉಪಜಾತಿ ‘ಗೊತ್ತಿಲ್ಲ’ ಎಂದು ನಮೂದಿಸಲು ಆದಿದ್ರಾವಿಡ ಸಮಾಜ ಸೇವಾ ಸಂಘ ಮನವಿ

adidravida
06/05/2025

ಮಂಗಳೂರು:  ಒಳಮೀಸಲಾತಿ ಹಿನ್ನೆಲೆ ಹೈಕೋರ್ಟ್‌ನ ನಿವೃತ್ತ ನ್ಯಾ ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗದಿಂದ ಸಮೀಕ್ಷೆ ಆರಂಭಗೊಂಡಿದೆ. ಈ ನಿಟ್ಟಿನಲ್ಲಿ ಶ್ರೀ ಸತ್ಯ ಸಾರಮಾನಿ ಕಾನದ ಕಟದ ಆರಾಧಕ ತುಳು ಭಾಷಿಕ ಆದಿ ದ್ರಾವಿಡ ಸಮುದಾಯ ಮೂಲ ಜಾತಿಯಾಗಿಯೂ ಹಾಗೂ ಉಪ ಜಾತಿ ‘ಗೊತ್ತಿಲ್ಲ ಎಂದೇ ನಮೂದಿಸುವಂತೆ ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಗಣೇಶ್ ಪ್ರಸಾದ್ ಸಲಹೆ ನೀಡಿದ್ದಾರೆ.

ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿಯಾಗಿ ನಮೂದು ಮಾಡುವುದರಿಂದ ನಮ್ಮ ಸಮುದಾಯ ಪ್ರತ್ಯೇಕ ಮೂಲ ಜಾತಿ ಅಥವಾ ಉಪಜಾತಿ ಇಲ್ಲದ ಆದಿ ದ್ರಾವಿಡ ಸಮುದಾಯ ಎಂದು ಪ್ರತ್ಯೇಕವಾಗಿ ಗುರುತಿಸಲು ಸಾಧ್ಯ ಎಂದು ಅವರು ತಿಳಿಸಿದರು.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ನಮ್ಮ ಸಮುದಾಯದ ಉಪ ಜಾತಿಯನ್ನು ಸೇರ್ಪಡೆಗೊಳಿಸಲು ಇದು ಸಹಕಾರಿಯಾಗಲಿದೆ. ಇದಕ್ಕಾಗಿ ನಮ್ಮ ಸಮುದಾಯದ ನಡುವೆ ಒಮ್ಮತದ ನಿರ್ಧಾರಕ್ಕೆ ಬರುವ ಸಲುವಾಗಿ ಸಂಘ ಶ್ರಮಿಸುತ್ತಿದೆ. ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಜಾತಿಗಳ ಮೂಲ ಜಾತಿಯನ್ನು ಸೂಚಿಸುವಂತೆ ಕೇಳಿಕೊಳ್ಳಲಾಗುತ್ತದೆ. ಈ ವೇಳೆ ದ.ಕ., ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹರಡಿರುವ ತುಳುನಾಡು ಮೂಲದ ಆದಿ ದ್ರಾವಿಡ ಸಮುದಾಯ ಈ ಬಗ್ಗೆ ಗಮನ ಹರಿಸಬೇಕು ಎಂದರು.

ಸಮುದಾಯಕ್ಕೆ ಗೌರವಯುತ ಉಪಜಾತಿ ಹೆಸರು ಸೇರ್ಪಡೆಗೊಳಿಸುವ ಬಗ್ಗೆ ಸಂಘ ಹೋರಾಟಕ್ಕೆ ಮುಂದಾಗಿದೆ. ಹಾಗಾಗಿ ಈ ಬಗ್ಗೆ ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗದೆ ಸಮೀಕ್ಷೆ ಸಂದರ್ಭ ಉಪ ಜಾತಿ ಕಾಲಂನಲ್ಲಿ ಗೊತ್ತಿಲ್ಲ ಎಂಬುದಾಗಿಯೇ ನಮೂದು ಮಾಡುವಂತೆ ಅವರು ಸಲಹೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಶಿವಾನಂದ ಬಳ್ಳಾಲ್‌ಬಾಗ್, ಜಿಲ್ಲಾಧ್ಯಕ್ಷ ಶ್ರೀನಿವಾಸ ಅರ್ಬಿಗುಡ್ಡೆ, ರಾಜ್ಯ ಜೊತೆ ಕಾರ್ಯದರ್ಶಿ ಸುರೇಶ್ ಪಿ.ಬಿ. ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ