ಸ್ತ್ರೀ ವಿರೋಧಿ ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ತಾಜ್ ಮಹಲ್ ಭೇಟಿ ರದ್ದು

ನವದೆಹಲಿ: ಭಾರತಕ್ಕೆ ಭೇಟಿ ನೀಡಿರುವ ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರ ತಾಜ್ ಮಹಲ್ ಭೇಟಿ ಇಂದು (ಭಾನುವಾರ) ದಿಢೀರ್ ಆಗಿ ರದ್ದಾಗಿದೆ.
ಅಫ್ಘಾನಿಸ್ತಾನ ವಿದೇಶಾಂಗ ಸಚಿವರ ಅಗ್ರಾ ಭೇಟಿ ರದ್ದಾಗಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
ಆಗ್ರಾದ ಐತಿಹಾಸಿಕ ತಾಜ್ ಮಹಲ್ ಗೆ ಅಮೀರ್ ಖಾನ್ ಮುತ್ತಾಕಿ ಅವರ ಭೇಟಿ ಇಂದು (ಅ.12) ನಿಗದಿಯಾಗಿತ್ತು. ಮುತ್ತಾಕಿ ಅವರು ಶನಿವಾರದಂದು ಉತ್ತರ ಪ್ರದೇಶದ ಸಹಾರನಪುರ ಜಿಲ್ಲೆಯ ದೇವಬಂದ್ ನಲ್ಲಿರುವ ಇಸ್ಲಾಂ ಶಿಕ್ಷಣದ ಪ್ರತಿಷ್ಠಿತ ಸಂಸ್ಥೆದಾರುಲ್ ಉಲೂಮ್ಗೆ ಭೇಟಿ ನೀಡಿದ್ದರು. ಆದರೆ ಮುತ್ತಾಕಿ ಅವರ ಸುದ್ದಿಗೋಷ್ಠಿಗೆ ಪತ್ರಕರ್ತೆಯರಿಗೆ ಅವಕಾಶ ನೀಡದೇ ಸ್ತ್ರೀ ವಿರೋಧಿ ಧೋರಣೆ ತೋರಿಸಿದ್ದರು. ಈ ವಿಚಾರ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿತ್ತು.
ಆರು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಮುತ್ತಾಕಿ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಈ ವೇಳೆ ಕಾಬೂಲ್ ನಲ್ಲಿ ರಾಯಭಾರಿ ಕಚೇರಿ ಪುನರಾರಂಭ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗುವುದಾಗಿ ಜೈಶಂಕರ್ ಭರವಸೆ ನೀಡಿದ್ದರು.
ಅಫ್ಘಾನಿಸ್ತಾನದಲ್ಲಿ ನಾಲ್ಕು ವರ್ಷದ ಹಿಂದೆ ಅಧಿಕಾರ ಪಡೆದ ಬಳಿಕ ತಾಲಿಬಾನ್ ನ ಉನ್ನತ ನಾಯಕರೊಬ್ಬರು ಇದೇ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD