ಶ್ರೀರಾಮ ಪ್ರಾಣಪ್ರತಿಷ್ಠಾಪನೆಯಂದು ಘೋಷಿಸಿದ್ದ ಅರ್ಧ ದಿನದ ರಜೆಯನ್ನು ವಾಪಸ್ ಪಡೆದ ಏಮ್ಸ್

ನವದೆಹಲಿ: ಶ್ರೀರಾಮ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ದಿನ ಅರ್ಧ ದಿನ ರಜೆ ಘೋಷಿಸಿದ್ದ ದೆಹಲಿ ಏಮ್ಸ್ ಆಡಳಿತ ಇದೀಗ ತನ್ನ ನಿರ್ಧಾರವನ್ನು ವಾಪಸ್ ಪಡೆದುಕೊಂಡಿದೆ.
ದೆಹಲಿಯ ಏಮ್ಸ್ ಆಡಳಿತ ಕಚೇರಿಯ ಅಧಿಕಾರಿ ರಾಜೇಶ್ ಕುಮಾರ್ ಪ್ರಕಟಿಸಿದ ಪತ್ರದಲ್ಲಿ ಜ.22 ರಂದು ತುರ್ತು ಸೇವೆಗಳನ್ನು ಹೊರತುಪಡಿಸಿದ ಸೇವೆಗಳಿಗೆ ಮಧ್ಯಾಹ್ನ 2:30ರವರೆಗೆ ಏಮ್ಸ್ ರಜೆ ಘೋಷಿಸಲಾಗಿತ್ತು. ಎಲ್ಲಾ ತುರ್ತು ವೈದ್ಯಕೀಯ ಸೇವೆಗಳು ಕಾರ್ಯನಿರ್ವಹಿಸಲಿವೆ ಎಂದು ಏಮ್ಸ್ ಸ್ಪಷ್ಟಪಡಿಸಿತ್ತು.
ಈ ಪ್ರಕಟಣೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ರೋಗಿಗಳು ವಾರಗಟ್ಟಲೆ, ಮತ್ತು ಕೆಲವೊಮ್ಮೆ, ಪ್ರೀಮಿಯರ್ ಹೆಲ್ತ್ ಕೇರ್ ಸೌಲಭ್ಯದಲ್ಲಿ ಅಪಾಯಿಂಟ್ ಮೆಂಟ್ ಪಡೆಯಲು ತಿಂಗಳುಗಟ್ಟಲೆ ಕಾಯುತ್ತಾರೆ. ಏಕಾಏಕಿ ಒಪಿಡಿ ಸೇವೆಗಳನ್ನು ಬಂದ್ ಮಾಡಿದರೆ, ಅಂತಹವರಿಗೆ ಕಷ್ಟವಾಗಲಿದೆ ಎಂದು ತರಾಟೆಗೆತ್ತಿಕೊಂಡಿದ್ದರು. ಇದರ ಬೆನ್ನಲ್ಲೇ ಇಂದು ಬೆಳಿಗ್ಗೆ ಮತ್ತೊಂದು ಅಧಿಸೂಚನೆಯನ್ನು ಏಮ್ಸ್ ಹೊರಡಿಸಿದ್ದು, OPD ಬರುವ ರೋಗಿಗಳಿಗೆ ಯಾವುದೇ ಅನಾನುಕೂಲತೆಯಾಗದಂತೆ ಎಚ್ಚರ ವಹಿಸಲು ಮತ್ತು ರೋಗಿಗಳ ಆರೈಕೆಗೆ ಅನುಕೂಲವಾಗುವಂತೆ ಅಪಾಯಿಂಟ್‌ಮೆಂಟ್ ಹೊಂದಿರುವ ರೋಗಿಗಳಿಗೆ ಸೇವೆಗಳು ಲಭ್ಯವಿರಲಿದೆ ಎಂದು ಹೇಳಿದೆ.
ಅಯೋಧ್ಯೆ ಕಾರ್ಯಕ್ರಮಕ್ಕೆ ಅರ್ಧ ದಿನದ ವಿರಾಮದ AIIMS ಘೋಷಣೆಯನ್ನು ಪ್ರತಿಪಕ್ಷ ನಾಯಕರು ಕೂಡ ಬಲವಾಗಿ ಟೀಕಿಸಿದ್ದರು. ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಆರೋಗ್ಯ ಸೇವೆಯ ಆಸ್ಪತ್ರೆಗಳನ್ನು ಮುಚ್ಚುವುದು ಅನಿವಾರ್ಯವೇ? ಅನ್ನೋ ಪ್ರಶ್ನೆಗಳಿಗೆ ಕಾರಣವಾಗಿದೆ.