ಜೀವ ಜಗತ್ತಿನ ಬಗ್ಗೆ ಬೆರಗು ಮೂಡಿಸುವ ಏರೋಪ್ಲೇನ್ ಚಿಟ್ಟೆ ಕೃತಿ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ತೇಜಸ್ವಿ ಓದು ಕಾರ್ಯಕ್ರಮ

ಕೊಟ್ಟಿಗೆಹಾರ:ಜೀವ ಜಗತ್ತಿನ, ಕ್ರಿಮಿ ಕೀಟಗಳ, ಪ್ರಾಣಿ ಪಕ್ಷಿಗಳ, ನೆಲ ಜಲದ, ಮರ ಗಿಡಗಳ ಮತ್ತು ಮಾನವ ಸಂಬಂಧಗಳ ಕುರಿತ ಕಥೆಗಳು ತೇಜಸ್ವಿ ಅವರ ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು ಕೃತಿಯಲ್ಲಿದ್ದು ಜೀವ ಜಗತ್ತಿನ ಬಗ್ಗೆ ಬೆರಗು ಮೂಡಿಸುತ್ತದೆ ಎಂದು ರಂಗಕರ್ಮಿ ಡಿ.ಎಂ.ಮಂಜುನಾಥಸ್ವಾಮಿ ಹೇಳಿದರು.
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ನಡೆದ ತೇಜಸ್ವಿ ಓದು ಕಾರ್ಯಕ್ರಮದಲ್ಲಿ ತೇಜಸ್ವಿ ಅವರ ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು ಕೃತಿಯ ಬಗ್ಗೆ ಉಪನ್ಯಾಸ ನೀಡಿ ಅವರು ಮಾತನಾಡಿದರು. ಪರಿಸರಕ್ಕೆ ಹತ್ತಿರವಾಗಿ ಮತ್ತು ಪೂರಕವಾಗಿ ಪ್ರಾಣಿ ಪಕ್ಷಿಗಳು ಬದುಕುತ್ತವೆ, ಆ ಪ್ರಾಣಿ ಪಕ್ಷಿಗಳು ಹೇಗೆ ಅಪಾಯದ ಅಂಚಿನಲ್ಲಿವೆ, ಆ ಪ್ರಾಣಿ ಪಕ್ಷಿಗಳ ರಕ್ಷಣೆಯ ಜವಾಬ್ದಾರಿ ನಮ್ಮೆಲರ ಮೇಲಿದೆ ಎಂಬುದನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ ಎಂದರು.
ಹಳ್ಳಿಯ ಕೊನೆ ಅಂಚಿನ ಜನರ ರೂಡಿಯ ಮಾತುಗಳನ್ನು ಕೂಡ ಸಂಶ್ಲೇಷಣೆ ಮಾಡಿ ಆ ಮಾತುಗಳಲ್ಲಿನ ಸತ್ಯವನ್ನು, ವೈಜ್ಞಾನಿಕವಾಗಿರುವ ಸಂಗತಿಗಳನ್ನು ಕಂಡು ಹಿಡಿಯುವಂತಹ ಕೆಲಸವನ್ನು ಮಾಡಿದ್ದಾರೆ. ಸಮಾಜದ ಕೊನೆಯಂಚಿನ ಜನರ ಬದುಕನ್ನು ತಮ್ಮ ಕೃತಿಗಳಲ್ಲಿ ಕಥೆಯಾಗಿಸಿದ್ದಾರೆ. ತೇಜಸ್ವಿ ಅವರ ಕೃತಿಗಳನ್ನು ಓದುವುದರಿಂದ ಪರಿಸರಕ್ಕೆ ಪೂರಕವಾಗಿ ಬದುಕಬೇಕು ಎಂಬ ಅರಿವು ನಮ್ಮಲ್ಲಿ ಮೂಡುತ್ತದೆ. ತೇಜಸ್ವಿ ಅವರು ಓದಿದ್ದು ಕನ್ನಡ ಸಾಹಿತ್ಯವಾಗಿದ್ದರೂ ಕೂಡ ಯಾವ ಜೀವ ವಿಜ್ಞಾನಿಗೂ ಕಡಿಮೆ ಇಲ್ಲದ ಕೆಲಸವನ್ನು ಮಾಡಿದವರು ಪೂರ್ಣಚಂದ್ರ ತೇಜಸ್ವಿ ಅವರು. ಯಾವತ್ತೂ ಅಳಿಸಿ ಹೋಗದಂತಹ ಪರಿಸರದ ಕೌತುಕಗಳನ್ನು ತಮ್ಮ ಕೃತಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ತೇಜಸ್ವಿ ಅವರ ಕೃತಿಗಳನ್ನು ಮಕ್ಕಳು, ವಿದ್ಯಾರ್ಥಿಗಳು ಓದುವಂತಾಗಬೇಕಿದೆ. ಆ ಮೂಲಕ ಪರಿಸರದ ಬಗ್ಗೆ ಬೆರಗು, ಕುತೂಹಲ, ಜಾಗೃತಿ ಮೂಡಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕರಾದ ನಂದೀಶ್ ಬಂಕೇನಹಳ್ಳಿ, ತಾಂತ್ರಿಕ ಸಹಾಯಕರಾದ ಸ್ಯಾಮ್ಯುಯೆಲ್ ಹ್ಯಾರಿಸ್, ಪ್ರತಿಷ್ಠಾನದ ಸಿಬ್ಬಂದಿ ಸತೀಶ್ ಇದ್ದರು.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw