ಮದ್ದೂರಿನ ಗಲಾಟೆಯ ಶಬ್ದದಲ್ಲಿ ಮಂಗಳೂರಿನ ಭೀಕರ ಅಪಘಾತದ ಶಬ್ದ ಕೇಳಲೇ ಇಲ್ಲ!

ಮಂಗಳೂರು: ಮದ್ದೂರಿನಲ್ಲಿ ಗಣೇಶೋತ್ಸವದ ವಿಚಾರದಲ್ಲಿ ನಡೆದ ಗಲಾಟೆ ಶಬ್ದ ಎಲ್ಲೆಡೆ ಕೇಳಿ ಬರುತ್ತಿತ್ತು. ರಾಜಕಾರಣಿಗಳ ಹಿಂದೂ—ಮುಸ್ಲಿಮ್ ಎಂಬ ಹೇಳಿಕೆಯ ಭರಾಟೆಯೂ ಜೋರಾಗಿತ್ತು. ಇತ್ತ ಮಂಗಳೂರಿನಲ್ಲಿ ಮಹಿಳೆಯೊಬ್ಬರು ರಸ್ತೆ ಗುಂಡಿಗೆ ಬಿದ್ದು, ಲಾರಿಯಡಿಗೆ ಸಿಲುಕಿ ದುರಂತವಾಗಿ ಸಾವನ್ನಪ್ಪಿದ್ದರು. ಮದ್ದೂರಿನ ಗಲಾಟೆಯ ವಿಚಾರ ಸುದ್ದಿವಾಹಿನಿಗಳಲ್ಲಿ ಜೋರಾಗಿತ್ತು. ಆದ್ರೆ ಮಂಗಳೂರಿನಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾದ ಮಹಿಳೆಯ ಸುದ್ದಿ ಸಣ್ಣದಾಗಿ ಅಲ್ಲೆಲ್ಲೋ ಸಣ್ಣಪುಟ್ಟ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿತು.
ಎಲ್ಲಿಯ ಮದ್ದೂರು, ಎಲ್ಲಿಯ ಮಂಗಳೂರು ಅಲ್ಲಿಗೂ ಇಲ್ಲಿಗೂ ಯಾಕಪ್ಪಾ ಹೋಲಿಕೆ ಮಾಡ್ತೀರಿ ಅಂತ ಕೇಳುವವರು ಕೂಡ ಇರಬಹುದು. ಆದ್ರೆ ಮಂಗಳೂರಿನಲ್ಲಿ ಮೃತಪಟ್ಟ ಮಾಧವಿ ಅವರ ಸಾವು ಎಷ್ಟೊಂದು ಭಯಂಕರವಾಗಿತ್ತೆಂದರೆ, ರಸ್ತೆಯಲ್ಲಿ ಮಹಿಳೆಯ ದೇಹ ಛಿದ್ರಛಿದ್ರಗೊಂಡಿತ್ತು. ಯಾವುದೋ ಬಟ್ಟೆಯಲ್ಲಿ ಮೃತದೇಹವನ್ನು ಹೆಕ್ಕಿ ಎತ್ತಿಕೊಂಡು ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ದೃಶ್ಯ ಪ್ರಜ್ಞಾವಂತ ನಾಗರಿಕರನ್ನು ಚಿಂತೆಗೀಡು ಮಾಡಿದೆ. ಈ ಸಾವಿಗೆ ಯಾರು ಹೊಣೆ? ಇಂತಹ ವಿಚಾರಗಳು ಯಾಕೆ ಸದ್ದಿಲ್ಲದೇ ಮರೆಯಾಗ್ತಾವೆ? ಈ ಘಟನೆಯ ಬಗ್ಗೆ ಯಾವ ರಾಜಕಾರಣಿಗಳೂ ಮರುಕ ವ್ಯಕ್ತಪಡಿಸಲಿಲ್ಲ, ಪ್ರತಿಭಟನೆಗಳು ನಡೆಯಲಿಲ್ಲ, ಮಂಗಳೂರು ಬಂದ್ ಆಗಲಿಲ್ಲ, ಕಾಂಗ್ರೆಸ್—ಬಿಜೆಪಿ ಎರಡೂ ಪಕ್ಷಗಳು ಕೂಡ ಈ ವಿಚಾರದಲ್ಲಿ ಮೌನವಹಿಸಿವೆ.
ಮಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಲಿಯಾಗ್ತಿರೋದು ಇದು ಮೊದಲೇನಲ್ಲ, ಇಂತಹ ಎಷ್ಟೋ ಸಾವುಗಳಾಗಿವೆ. ಆದ್ರೆ ಇದೆಲ್ಲ ಇದ್ದಿದ್ದೆ… ಎನ್ನುವ ಜನರ ಮನಸ್ಥಿತಿ ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸಲು ಕಾರಣವಾಗಿದೆ. ಮಂಗಳೂರಿನ ನಂತೂರು ಸರ್ಕಲ್ ನಿಂದ ಬೈಕಂಪಾಡಿಯವರೆಗಿನ ರಸ್ತೆಯ ದುಸ್ಥಿತಿ ಹೀಗಿದೆ ಎಂದರೆ, ಈ ರಸ್ತೆಯ ಗುಂಡಿ ರಿಪೇರಿ ಮಾಡದಿದ್ದರೂ ನಡೆಯುತ್ತೆ, ಯಾರಾದರೂ ಗುಂಡಿಗೆ ಬಿದ್ದು ಸತ್ತರೆ, ಪತ್ರಿಕೆಯಲ್ಲಿ ಸತ್ತವನನ್ನು ದುರ್ದೈವಿ ಅಂತ ಬರೆದು ಬಿಡ್ತಾರೆ, ಅಲ್ಲಿಗೆ ಎಲ್ಲವೂ ಮುಕ್ತಾಯವಾಯ್ತು ಎಂಬಂತಿದೆ ಪರಿಸ್ಥಿತಿ. ಜನರು ಕೂಡ ಇದೆಲ್ಲ ಪ್ರಶ್ನಿಸಬೇಕಾದ ವಿಚಾರ ಎಂದು ಭಾವಿಸುವುದೇ ಇಲ್ಲ. ಅದೇ ಹಿಂದೂ ಮುಸ್ಲಿಮ್ ಗಲಾಟೆಯಾಗಿದ್ದರೆ. ಇಷ್ಟೊತ್ತಿಗೆ ಸುದ್ದಿವಾಹಿನಿಗಳಲ್ಲೂ ಮಂಗಳೂರು ಪ್ರಕ್ಷುಬ್ಧ ಎಂಬ ಟೈಟಲ್ ಬಂದಿರುತ್ತಿತ್ತು, ಮಂಗಳೂರು ಬಂದ್ ಕೂಡ ನಡೆಯುತ್ತಿತ್ತು. ರಾಜಕೀಯ ಪಕ್ಷಗಳ ನಾಯಕರ ದಂಡೇ ಬರುತ್ತಿತ್ತು, ಥರ ಥರದ ಪ್ರತಿಭಟನೆಗಳು, ಮೆರವಣಿಗೆಗಳು, ಅಭಿಯಾನಗಳು ಎಲ್ಲವೂ ನಡೆಯುತ್ತಿತ್ತು.
ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು:
ರಸ್ತೆಗೆ ಜನರು ಟಾಕ್ಸ್ ಪಾವತಿ ಮಾಡಬೇಕು, ಅದರ ಜೊತೆಗೆ ಟೋಲ್ ಗಳನ್ನೂ ಪಾವತಿ ಮಾಡಬೇಕು. ಇಷ್ಟೆಲ್ಲ ಮಾಡಿದ ಮೇಲೆಯೂ ವರ್ಷ ಪೂರ್ತಿ ರಸ್ತೆಯ ಧೂಳು ತಿನ್ನಬೇಕು, ದ್ವಿಚಕ್ರ ವಾಹನ ಸವಾರರಂತೂ ಗುಂಡಿಗೆ ಬಿದ್ದು, ಪ್ರಾಣವನ್ನೂ ಕಳೆದುಕೊಳ್ಳಬೇಕು. ಜನರು ತಮ್ಮ ಮೂಲಭೂತ ಸಮಸ್ಯೆಗಳಿಗೆ ಹೋರಾಟ ನಡೆಸುವುದನ್ನು ಬೆಳೆಸಿಕೊಳ್ಳಬೇಕಿದೆ. ಮಂಗಳೂರಿನಲ್ಲಿ ಮೂಲಭೂತ ಸಮಸ್ಯೆಗಳಿಗಾಗಿ ಹೋರಾಡುವವರ ಸಂಖ್ಯೆಯೇ ಕಡಿಮೆಯಾಗಿದೆ. ಮಂಗಳೂರಿನ ನಗರಗಳಲ್ಲೇ ರಸ್ತೆಗಳಲ್ಲಿ ಅಲ್ಲಲ್ಲಿ ಅವ್ಯವಸ್ಥೆಗಳು ಕಂಡು ಬರುತ್ತಿವೆ. ದಿನನಿತ್ಯ ಜನರು ಬಿದ್ದು, ಗಾಯ ಮಾಡಿಕೊಳ್ಳುತ್ತಿದ್ದಾರೆ. ಮಂಗಳೂರಿನ ನಂತೂರು ಸರ್ಕಲ್ ನಲ್ಲಂತೂ ಟ್ರಾಫಿಕ್ ಜಾಮ್ ನಿಂದ ಜನರು ನಿರಂತರವಾಗಿ ಪರದಾಡುತ್ತಿದ್ದಾರೆ. ಇದರ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಯದಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. ರಾಜಕೀಯ ಲಾಭಕ್ಕೆ ನಡೆಯುವ ಹೋರಾಟಗಳು ಯಾಕೆ ಜನರ ಸಮಸ್ಯೆಗಳ ವಿರುದ್ಧ ನಡೆಯುವುದಿಲ್ಲ ಎನ್ನುವುದನ್ನು ಜನರು ಯೋಚನೆ ಮಾಡಬೇಕಿದೆ. “ಜನರು ರಸ್ತೆ, ಚರಂಡಿ ಬಗ್ಗೆ ಮಾತನಾಡಬೇಡಿ” ಅಂತ ಬಹಿರಂಗವಾಗಿ ಹೇಳಿಕೆ ಕೊಡುವ ಕರಾವಳಿಯಲ್ಲಿ, ರಸ್ತೆ ಚರಂಡಿ ವಿಚಾರಗಳನ್ನ ಜನರು ಮರೆತಿದ್ದಕ್ಕೆ ಇಂದಿಗೂ ಅತ್ಯಂತ ಕೆಟ್ಟ ರಸ್ತೆಯಲ್ಲಿ ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ. ನಡು ರಸ್ತೆಯಲ್ಲಿ ಜನರು ಪ್ರಾಣ ಬಿಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD