ಅಸ್ಸಾಂನಿಂದ ಪ್ರತಿಯೊಬ್ಬ ಅಕ್ರಮ ನುಸುಳುಕೋರನನ್ನು ಹೊರ ಹಾಕುತ್ತೇವೆ: ಅಮಿತ್ ಶಾ ಗುಡುಗು
ಗುವಾಹಟಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಅಸ್ಸಾಂಗೆ ಭೇಟಿ ನೀಡಿದ್ದು, ರಾಜ್ಯದ ಅಭಿವೃದ್ಧಿ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.
ಗುವಾಹಟಿಯಲ್ಲಿ ನಡೆದ ಭಾರತೀಯ ಜನತಾ ಯುವ ಮೋರ್ಚಾದ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, “ಬಿಜೆಪಿ ಸರ್ಕಾರವು ಅಸ್ಸಾಂನಿಂದ ಪ್ರತಿಯೊಬ್ಬ ಅಕ್ರಮ ನುಸುಳುಕೋರನನ್ನು ಪತ್ತೆಹಚ್ಚಿ ಹೊರಹಾಕಲಿದೆ” ಎಂದು ಭರವಸೆ ನೀಡಿದರು. ಮುಂಬರುವ 2026ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಮನೆ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸುವ ಮೂಲಕ ನುಸುಳುಕೋರರನ್ನು ಗುರುತಿಸಲಾಗುವುದು ಎಂದು ಅವರು ಹೇಳಿದರು.
ತಮ್ಮ ಪ್ರವಾಸದ ಅವಧಿಯಲ್ಲಿ ಅಮಿತ್ ಶಾ ಅವರು ಪ್ರಾಗ್ಜೋತಿಷ್ಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (PMCH) ಸೇರಿದಂತೆ ಗೋಲಾಘಾಟ್, ತಿನಿ ಸುಕಿಯಾ, ಡಿಫು, ಬಾರ್ಪೇಟಾ ಮತ್ತು ಜೋರ್ಹತ್ನಲ್ಲಿ ಕ್ಯಾನ್ಸರ್ ಕೇಂದ್ರ ಹಾಗೂ ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದರು.
ಅಸ್ಸಾಂನ ಆರೋಗ್ಯ ವ್ಯವಸ್ಥೆಯು ಈಗ ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ಸಮಾನವಾಗಿ ಬೆಳೆಯುತ್ತಿದೆ ಎಂದು ಅವರು ಶ್ಲಾಘಿಸಿದರು.
ನುಸುಳುಕೋರರ ಸಮಸ್ಯೆಯನ್ನು ಕಾಂಗ್ರೆಸ್ ಪಕ್ಷವು ವ್ಯವಸ್ಥಿತವಾಗಿ ನಿರ್ಲಕ್ಷಿಸಿದೆ ಮತ್ತು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಅದನ್ನು ಬಳಸಿಕೊಂಡಿದೆ ಎಂದು ಶಾ ಆರೋಪಿಸಿದರು. ರಾಹುಲ್ ಗಾಂಧಿ ಅವರು ಮತದಾರರ ಪಟ್ಟಿಯಿಂದ ನುಸುಳುಕೋರರ ಹೆಸರು ತೆಗೆಯುವುದನ್ನು ವಿರೋಧಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ನೇತೃತ್ವದಲ್ಲಿ ಅಸ್ಸಾಂನಲ್ಲಿ 1,51,000 ಬಿಘಾ ಭೂಮಿಯನ್ನು ಅತಿಕ್ರಮಣ ಮುಕ್ತಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























