ಚಾಮರಾಜನಗರ: 1.63 ಕೋಟಿ ಪ್ರಯಾಣಿಕರಲ್ಲಿ ಕೋಟಿ ಮಹಿಳೆಯರ ‘ಶಕ್ತಿ’ ಪ್ರಯಾಣ

ಚಾಮರಾಜನಗರ: ಶಕ್ತಿ ಯೋಜನೆ ಜಾರಿಯಾದ ಬಳಿಕ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಯಾಣಿಸಿದ ಒಟ್ಟು ಪ್ರಯಾಣಿಕರಲ್ಲಿ ಶೇ.64 ರಷ್ಟು ಮಂದಿ ಮಹಿಳೆಯರೇ ಪ್ರಯಾಣ ಮಾಡಿದ್ದಾರೆ.
ಹೌದು…, ಶಕ್ತಿ ಯೋಜನೆಗೆ ಜಿಲ್ಲೆಯಲ್ಲಿ ಮಹಿಳೆಯರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಶಕ್ತಿ ಯೋಜನೆ ಜಾರಿಯಾದ ದಿನದಿಂದ ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 1,63,44,799 ಮಂದಿ ಪ್ರಯಾಣ ಮಾಡಿದ್ದು ಇವರಲ್ಲಿ 1,05,76,930 ಮಂದಿ ಮಹಿಳೆಯರೇ ಪ್ರಯಾಣ ಮಾಡಿದ್ದಾರೆ.
ರಾಜ್ಯ ಸರ್ಕಾರ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳ ಪೈಕಿ ಜೂ.11 ರಂದು ಶಕ್ತಿ ಯೋಜನೆ ಜಾರಿಯಾಗಿದೆ. ಉದ್ಯೋಗಕ್ಕಾಗಿ ದೂರದ ನಗರ, ಪಟ್ಟಣಗಳಿಗೆ ತೆರಳುವ ಮಹಿಳೆಯರಿಗೆ, ಶಾಲಾ ಕಾಲೇಜು ವಿದ್ಯಾರ್ಥಿನಿಯರು, ಯಾತ್ರಸ್ಥಳಗಳಿಗೆ ತೆರಳುವವರು ಯೋಜನೆಯ ಫಲಾನುಭವಿಗಾಗಿದ್ದಾರೆ.
ಜೂನ್ 11ರಂದು ಶಕ್ತಿ ಯೋಜನೆ ಚಾಮರಾಜನಗರ ಜಿಲ್ಲೆಯಲ್ಲಿ ಆರಂಭಗೊಂಡಿತು; ಜೂನ್ ಅಂತ್ಯದವರೆಗೆ ಒಟ್ಟಾರೆ 41,93,946 ಪ್ರಯಾಣಿಕರು ಚಾಮರಾಜನಗರ ನಿಗಮದ ಬಸ್ಸುಗಳಲ್ಲಿ ಸಂಚರಿಸಿದ್ದಾರೆ. ಈ ಪೈಕಿ 24,10,918 ರಷ್ಟು ಮಹಿಳೆಯರು ಪ್ರಯಾಣಿಸಿದ್ದಾರೆ. ಜುಲೈ ತಿಂಗಳಿನಲ್ಲಿ ಒಟ್ಟು 79,05,964 ಸಂಚರಿಸುವ ಪ್ರಯಾಣಿಕರಲ್ಲಿ 54,76,569 ರಷ್ಟು ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಆಗಸ್ಟ್ ತಿಂಗಳಲ್ಲಿ 42,44,889 ಪ್ರಯಾಣಿಕರು ಸಂಚರಿಸುವವರ ನಡುವೆ 26,89,443 ಮಹಿಳೆಯರು ಶಕ್ತಿ ಯೋಜನೆ ಫಲ ಪಡೆದಿದ್ದಾರೆ.
ಒಟ್ಟಾರೆ ಯೋಜನೆ ಆರಂಭಗೊಂಡ ದಿನದಿಂದ ಈವರೆಗೆ ಜಿಲ್ಲೆಯಲ್ಲಿ ಒಟ್ಟು 1,63,44,799 ಪ್ರಯಾಣಿಕರು ನಿಗಮದ ಬಸ್ಸುಗಳಲ್ಲಿ ಸಂಚರಿಸಿದ್ದು ಇವರಲ್ಲಿ 1,05,76,930 ಮಹಿಳಾ ಪ್ರಯಾಣಿಕರು ಇದ್ದು ಶೇ. 64.71ರಷ್ಟು ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಿದಂತಾಗಿದೆ.
ಇನ್ನು, ಚಾಮರಾಜನಗರ ವಿಭಾಗವು ಒಟ್ಟು 4 ಘಟಕಗಳನ್ನು ಹೊಂದಿದ್ದು, 507 ಬಸ್ಸುಗಳನ್ನು ಹೊಂದಿದೆ, ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆಯು ಹೆಚ್ಚಿದೆ. ವಾರಾಂತ್ಯದ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುವುದರಿಂದ ಬೇಡಿಕೆಗೆ ಅನುಗುಣವಾಗಿ ಬಸ್ಸುಗಳ ನಿಯೋಜನೆ ಮಾಡಲಾಗುತ್ತಿದೆ. ಅಗತ್ಯಕ್ಕೆ ತಕ್ಕಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮವು ಬಸ್ಸುಗಳ ಕಾರ್ಯಾಚರಣೆಗೆ ಕ್ರಮ ವಹಿಸುತ್ತಿದೆ ಎಂದು ಕೆ.ಎಸ್.ಆರ್.ಟಿ.ಸಿ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಅಶೋಕ್ ಕುಮಾರ್ ಅವರು ತಿಳಿಸಿದ್ದಾರೆ.ಒಟ್ಟಿನಲ್ಲಿ ಶಕ್ತಿ ಯೋಜನೆ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ದ್ವಿಗುಣಗೊಂಡಿದೆ.