ಹಾಸನದಲ್ಲಿ ಮತ್ತೊಂದು ಹೃದಯಾಘಾತ ಪ್ರಕರಣ: ಮಹಿಳೆ ಸಾವು, 18ಕ್ಕೇರಿದ ಮೃತರ ಸಂಖ್ಯೆ

ಹಾಸನ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವಿನ ಪ್ರಕರಣ ಮತ್ತೆ ಮುಂದುವರಿದಿದೆ. ಇದುವರೆಗೆ 40 ದಿನಗಳಲ್ಲಿ 17 ಜನರು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಇದೀಗ ಬೇಲೂರು ಪಟ್ಟಣದ ಜೆ.ಪಿ. ನಗರದ ಮಹಿಳೆಯೊಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಬೇಲೂರು ಪಟ್ಟಣದ ಜೆ.ಪಿ.ನಗರದ ಮಹಿಳೆ ಲೇಪಾಕ್ಷಿ (38) ಹೃದಯಾಘಾತದಿಂದ ಮೃತಪಟ್ಟವರಾಗಿದ್ದಾರೆ. ಲೇಪಾಕ್ಷಿಗೆ ಎದೆ ನೋವು ಕಾಣಿಸಿಕೊಂಡಾಗ ತಕ್ಷಣ ಅವರ ಪತಿ ಬೇಲೂರಿನ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಮಹಿಳೆ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕಳೆದ 40 ದಿನಗಳಲ್ಲಿ ಒಟ್ಟು 18 ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ರಾಜ್ಯ ಸರ್ಕಾರದ ನಿರ್ಲಕ್ಷ್ಯ:
ಹಾಸನ ಜಿಲ್ಲೆಯಲ್ಲಿ ನಿರಂತರವಾಗಿ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದರೂ. ರಾಜ್ಯ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ, ಇಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮಾಧ್ಯಮಗಳು ಈ ಸಂಬಂಧ ಪ್ರಶ್ನೆಗಳನ್ನು ಹಾಕಿದಾಗ, ಕಾರಣ ಏನೆಂದು ತಿಳಿದು ಮಾಹಿತಿ ಪಡೆಯುತ್ತೇನೆ ಎಂದು ಉತ್ತರ ನೀಡಿದ್ದಾರೆ. ಕಳೆದ 40 ದಿನಗಳಿಂದ ನಿರಂತರವಾಗಿ ಹೃದಯಾಘಾತದ ಪ್ರಕರಣಗಳ ವರದಿಯಾಗುತ್ತಿದ್ದರೂ, ಸರ್ಕಾರ ಇದರ ಗಂಭೀರತೆ ಅರಿತಂತೆ ಕಾಣುತ್ತಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD