ಲೇಡಿ ಸಿಂಗಂ ಎಂದೇ ಪ್ರಖ್ಯಾತಿ ಹೊಂದಿದ್ದ ಅರಣ್ಯಾಧಿಕಾರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ!
ಅಮರಾವತಿ: ಲೇಡಿ ಸಿಂಗಂ ಎಂದೇ ಪ್ರಖ್ಯಾತಿ ಹೊಂದಿದ್ದ ಮಹಾರಾಷ್ಟ್ರದ ಹರಿಸಾಲ್ ರೇಂಜ್ ನ ಅರಣ್ಯಾಧಿಕಾರಿ ದೀಪಾಲಿ ಚೌಹಾನ್ ಮೊಹೈತ್ ತಮ್ಮ ರಿವಾಲ್ವಾರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹರಿಸಾಲ್ ಗ್ರಾಮದಲ್ಲಿರುವ ಹೆಡ್ ಕ್ವಾಟ್ರಸ್ ನಲ್ಲಿ ತಮ್ಮ ಸರ್ವೀಸ್ ರಿವಾಲ್ವಾರ್ ನಿಂದ ಶುಕ್ರವಾರ ರಾತ್ರಿ ಅವರು ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಭಾರತೀಯ ಅರಣ್ಯಾಧಿಕಾರಿ (ಐಎಫ್ಎಸ್) ವಿನೋದ್ ಶಿವಕುಮಾರ್ ಎಂಬಾತನ ಕಿರುಕುಳದಿಂದಾಗಿ ತಾನು ಆತ್ಮಹತ್ಯೆಗೆ ಶರಣಾಗಿರುವುದಾಗಿ ದೀಪಾಲಿ ಡೆತ್ ನೋಟ್ ನಲ್ಲಿ ತಿಳಿಸಿದ್ದಾರೆ.
ಶಿವಕುಮಾರ್ ಕಿರುಕುಳದಿಂದಾಗಿ ತಾನು ಮೊದಲು ಗರ್ಭಪಾತಕ್ಕೆ ಒಳಗಾಗಿದ್ದೆ ಎಂದು ಆತ್ಮಹತ್ಯೆ ಪತ್ರದಲ್ಲಿ ದೀಪಾಲಿ ಆರೋಪಿಸಿದ್ದಾರೆ. ಇದಲ್ಲದೆ, ಶಿವಕುಮಾರ್ ನೀಡಿದ ಲೈಂಗಿಕ ಮಾನಸಿಕ ಕಿರುಕುಳವನ್ನು ವಿವರವಾಗಿ ಆತ್ಮಹತ್ಯೆ ಪತ್ರದಲ್ಲಿ ತಿಳಿಸಿದ್ದಾರೆ.
ದೀಪಾಲಿ ಆತ್ಮಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಶಿವಕುಮಾರ್ ಪರಾಟ್ವಾಡಾಗೆ ತೆರಳಿ, ತಮ್ಮ ಕಾರನ್ನು ಅಲ್ಲಿಯೇ ಬಿಟ್ಟು, ಟ್ಯಾಕ್ಸಿ ಯಲ್ಲಿ ನಾಗ್ಪುರ ರೈಲ್ವೆ ನಿಲ್ದಾಣಕ್ಕೆ ತೆರದ್ದಾರೆ. ಬೆಂಗಳೂರಿಗೆ ತೆರಳಲೆಂದು ರೈಲು ನಿಲ್ದಾಣದಲ್ಲಿ ಇರುವಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ವಿನೋದ್ ಶಿವಕುಮಾರ್ ನನ್ನು ಅಮಾನತು ಮಾಡಲಾಗಿದೆ.
ಇನ್ನೂ ಅಮರಾವತಿಯ ಇರ್ವಿನ್ ಜನರಲ್ ಆಸ್ಪತ್ರೆಯಲ್ಲಿ ಶುಕ್ರವಾರ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ದೀಪಾಲಿ ಅವರು ಐದು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.




























