1,500 ಎಳನೀರು ಕದ್ದೋಯ್ದ ಕಳ್ಳರು ಕೊನೆಗೆ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ? - Mahanayaka

1,500 ಎಳನೀರು ಕದ್ದೋಯ್ದ ಕಳ್ಳರು ಕೊನೆಗೆ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ?

17/08/2023


Provided by

ಬೆಂಗಳೂರು: ಬೆಂಗಳೂರಿನ ಜಯನಗರ ರಾಷ್ಟ್ರೀಯ ವಿದ್ಯಾಲಯ ಮೆಟ್ರೋ ನಿಲ್ದಾಣದ ಬಳಿ ರಾತ್ರೋರಾತ್ರಿ ಟಾಟಾ ಏಸ್ ವಾಹನದಲ್ಲಿ ಬಂದ ಖದೀಮರು ರಸ್ತೆ ಬದಿಯಲ್ಲಿ ಇಟ್ಟಿದ್ದ ಬರೋಬ್ಬರಿ 1,500 ಎಳನೀರನ್ನು  ಕದ್ದುಕೊಂಡು ಹೋಗಿರುವ ಘಟನೆ
ಆಗಸ್ಟ್ 7ರಂದು ಮುಂಜಾನೆ ಕಳ್ಳತನ ನಡೆದಿರುವುದು‌ ವರದಿಯಾಗಿದೆ.

ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಮಾಲೀಕ ಸಲೀಂ ದೂರು ದಾಖಲಿಸಿದ್ದಾರೆ.

ಕ್ಯಾಂಟರ್‌ ನಲ್ಲಿ ಬಂದ ಕಳ್ಳರು ಸುಮಾರು 1,500 ಎಳನೀರನ್ನು ಕಳ್ಳತನ ಮಾಡಿದ್ದಾರೆ. ನಂಬರ್ ಪ್ಲೇಟ್‌ಗೆ ಮಸಿ ಬಳಿದು ಖದೀಮರು ಕೃತ್ಯ ಎಸಗಿದ್ದಾರೆ.

ಮೊದಲಿಗೆ ಇದನ್ನು ಸಣ್ಣ ಕೇಸ್ ಎಂದು ಪೊಲೀಸರು ಕಡೆಗಣಿಸಿದ್ದರು. ಆದರೆ ಬಳಿಕ ಯಾವುದೇ ಸುಳಿವೂ ಸಿಗದ ಆರೋಪಿಗಳನ್ನು ಬಂಧಿಸಿದ್ದೇ ರೊಚಕ ಎನಿಸಿಕೊಂಡಿದೆ.

ಘಟನಾ ಸ್ಥಳದಲ್ಲಿ ಆರೋಪಿಗಳು ಯಾವುದೇ ಸುಳಿವು ಬಿಟ್ಟಿರಲಿಲ್ಲ. ಬಳಿಕ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಗೂಗಲ್ ಪೇ ಕ್ಲೂ ದೊರೆತಿದೆ.

ಖದೀಮರ ಸೆರೆಗಾಗಿ ಪೊಲೀಸರು ಸುಮಾರು 60ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕಳ್ಳರು ಮುಂಜಾನೆ ಉತ್ತರಹಳ್ಳಿ ಬಳಿ ಟೀ ಕುಡಿದ ದೃಶ್ಯ ಪತ್ತೆಯಾಗಿತ್ತು. ಅದೇ ಜಾಗದಲ್ಲಿ ಗೂಗಲ್ ಪೇನಲ್ಲಿ ಹಣ ಪಾವತಿ ಮಾಡಿದ್ದರು. ಬಳಿಕ ಅಲ್ಲಿಗೆ ತೆರಳಿದ ಪೊಲೀಸರು ಗೂಗಲ್ ಪೇ ನಂಬರ್ ಪಡೆದು ಯಾವ ಬ್ಯಾಂಕ್ ಖಾತೆಯಿಂದ ಹಣ ಸಂದಾಯ ಆಗಿದೆ ಎಂದು ಪರಿಶೀಲಿಸಿದ್ದಾರೆ. ಈ ಮೂಲಕ ಪೊಲೀಸರು ಕಳ್ಳರ ಸುಳಿವನ್ನು ಪಡೆದಿದ್ದರು.

ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಗೌತಮ್, ರಘು ಹಾಗೂ ಮಣಿಕಂಠ ಬಂಧಿತ ಆರೋಪಿಗಳು. ಈ ಮೂವರ ಮೇಲೆ ಈ ಹಿಂದೆ ಕೂಡಾ ಹಲವಾರು ಕೇಸ್‌ಗಳು ದಾಖಲಾಗಿವೆ. ರಘು ಮೇಲೆ ಕೊಲೆ ಯತ್ನ ಪ್ರಕರಣ ಕೂಡಾ ದಾಖಲಾಗಿದೆ.

ಇತ್ತೀಚಿನ ಸುದ್ದಿ