ಆಟಿಡೊಂಜಿ ದಿನ: ಜಾತಿ –ಧರ್ಮ ಭೇದಭಾವವಿಲ್ಲದೇ ಆಟಿ ತಿಂಗಳ ತಿನಿಸುಗಳ ಸಹಭೋಜನ

ಬಜಪೆ: ದ.ಕ. ಜಿ.ಪಂ.ಹಿ.ಪ್ರಾ ಶಾಲೆ ಕರಂಬಾರು, ಹಳೆ ವಿದ್ಯಾರ್ಥಿ ಸಂಘ (ರಿ) ಕರಂಬಾರು, ಶಾಲಾಭಿವೃದ್ಧಿ ಸಮಿತಿ, ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಹಾಗೂ ಪೋಷಕರ ಸಹಕಾರದೊಂದಿಗೆ ಕರಂಬಾರು ಶಾಲಾ ಮೈದಾನದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಮುಲ್ಕಿ ಮೂಡಬಿದ್ರೆ ಜನಪ್ರಿಯ ಶಾಸಕರಾದ ಉಮಾನಾಥ ಕೋಟ್ಯಾನ್ ಉದ್ಘಾಟಿಸಿ ಮಾತನಾಡುತ್ತಾ, ಹಿಂದಿನ ಕಾಲದಲ್ಲಿ ತುಳುವರಿಗೆ ಆಟಿ ತಿಂಗಳು ತುಂಬಾ ಕಷ್ಟದ ಸಮಯವಾಗಿತ್ತು. ಕೃಷಿ ಬದುಕಿನ ಮಧ್ಯೆ ಬಡತನದ ಮಧ್ಯೆಯೂ ಸಂಸ್ಕಾರಯುತ ಜೀವನ ನಡೆಸುತ್ತಿದ್ದರು. ವಿದ್ಯಾಭ್ಯಾಸದ ಜೊತೆಗೆ ನಮ್ಮ ನಾಡಿನ ಸಂಸ್ಕೃತಿ ಸಂಸ್ಕಾರಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲು ಕಳೆದ ಆರು ವರ್ಷದಿಂದ ಈ ಆಟಿಡೊಂಜಿ ದಿನ ಕಾರ್ಯ ನಡೆಸುತ್ತಿರುವ ಹಳೆ ವಿದ್ಯಾರ್ಥಿ ಸಂಘದ ಕಾರ್ಯ ಅಭಿನಂದನೀಯ ಎಂದು ನುಡಿದರು.
ಸಂಪನ್ಮೂಲ ವ್ಯಕ್ತಿ ವೀಣಾ ಶೆಟ್ಟಿ ಮಾತನಾಡುತ್ತಾ, ನಿಜವಾಗಿಯೂ ಮಕ್ಕಳಿಗೆ ನಮ್ಮ ಹಳ್ಳಿ ಬದುಕಿನ ಸಂಸ್ಕ್ರತಿಯ ಅನಾವರಣ ತಿಳಿಸಿಕೊಟ್ಟದ್ದು ಒಳ್ಳೆಯ ಕಾರ್ಯಕ್ರಮ ಎಂದು ಮೆಚ್ಚುಗೆ ಸೂಚಿಸಿದರು. ಸಭೆಯ ಅಧ್ಯಕ್ಷತೆಯನ್ನು ಹ.ವಿ.ಸಂಘದ ಅಧ್ಯಕ್ಷರಾದ ಸತೀಶ್ ದೇವಾಡಿಗ ವಹಿಸಿದ್ದರು. ವೇದಿಕೆಯಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಗುಣಪಾಲ್ ದೇವಾಡಿಗ, ಜಯಂತ ಅಮೀನ್ ಕೆಂಜಾರು ಕರ್ಣಾಟಕ ಬ್ಯಾಂಕ್ ಪ್ರಭಂದಕರು, ಸತೀಶ್ ಸಾಲಿಯಾನ್ ಗಾರ್ಡನ್ & ಸಿವಿಲ್ ಕಾಂಟ್ರಾಕ್ಟರ್ ಸಿದ್ದಾರ್ಥನಗರ ಇವರು ಉಪಸ್ಥಿತರಿದ್ದರು. ಅತಿಥಿ ಗಣ್ಯರನ್ನು ಶಾಲಾ ಮುಖ್ಯೋಪಾಧ್ಯಾಯಿನಿಯಾದ ಉಷಾಕಿರಣ್ ಸ್ವಾಗತಿಸಿದರು. ಹ.ವಿ.ಸಂಘದ ಕೋಶಾಧಿಕಾರಿಯಾದ ವಿನೋದ್ ಅರ್ಬಿ ಪ್ರಸ್ತಾವನೆ ಮಾಡಿದರು, ಹ.ವಿ.ಸಂಘದ ಶಿಕ್ಷಣ ಕಾರ್ಯದರ್ಶಿ ಕೃಷ್ಣಾನಂದ.ಡಿ ಇವರು ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕಿಯಾದ ಗೀತಾ ಅವರು ನಿರೂಪಿಸಿದರು.
ನಂತರ ಜಾತಿ–ಧರ್ಮ ಎನ್ನುವ ಭೇದವಿಲ್ಲದೆ, ಪೋಷಕರು ಮನೆಮನೆಯಿಂದ ತಯಾರಿಸಿ ತಂದ ಆಟಿ ತಿಂಗಳ ವಿವಿಧ ತಿಂಡಿ ತಿನಿಸುಗಳನ್ನು ಶಾಲಾ ವಿದ್ಯಾರ್ಥಿಗಳು , ಪೋಷಕರು, ಹ.ವಿ.ಸಂಘದ ಸದಸ್ಯರು ಸೇರಿ ಸುಮಾರು ಒಂದು ಸಾವಿರ ಮಂದಿ ಸಾಮೂಹಿಕ ಸಹಭೋಜನದ ರುಚಿ ಸವಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD