ಪಟಾಕಿ ಗೋಡೌನ್ ಮೇಲೆ ದಾಳಿ: 25 ಲಕ್ಷ ರೂ. ಮೌಲ್ಯದ ಪಟಾಕಿ ವಶ, ಇಬ್ಬರು ವಶಕ್ಕೆ

ಅಕ್ಟೋಬರ್ 26 ರಂದು ಜೀವನ ಭೀಮಾನಗರ ಪೊಲೀಸ್ ಠಾಣಾ ಸರಹದ್ದಿನ ನ್ಯೂ ತಿಪ್ಪಸಂದ್ರ ಮುಖ್ಯ ರಸ್ತೆಯ ಧಹಿಯಾ ಎಂಬ ಮಾರ್ಟ್‌ನಲ್ಲಿ ಯಾವುದೇ ಸರ್ಕಾರದ ಪರವಾನಗಿ ಇಲ್ಲದೆ, ಅನಧಿಕೃತವಾಗಿ ಪಟಾಕಿ ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿತ್ತು.
ದಾಳಿಯಲ್ಲಿ ಅಂಗಡಿಯಲ್ಲಿ ಜೀವನಕ್ಕೆ ಅಪಾಯವಾಗದಂತೆ, ಯಾವುದೇ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳದೆ ಅವುಗಳನ್ನು ಅಪಾಯಕಾರಿ ಸ್ಥಿತಿಯಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವುದು ಖಚಿತವಾಗಿರುತ್ತದೆ. ದಾಳಿಯಲ್ಲಿ ಸಿಸಿಬಿಯ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು, ಒಟ್ಟು 25 ಲಕ್ಷ ರೂ. ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಂಡು, ಅವರ ವಿರುದ್ಧ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.
ಅದೇ ಪ್ರಕಾರ ಅ.31 ರಂದು ಜ್ಞಾನಭಾರತಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಪರವಾನಗಿಯನ್ನು ಪಡೆಯದೇ ಮತ್ತು ಜನವಸತಿ ಪ್ರದೇಶದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಅಕ್ರಮವಾಗಿ ಪಟಾಕಿಯನ್ನು ದಾಸ್ತಾನು ಮಾಡಿರುತ್ತಾರೆ ಎಂಬ ಮಾಹಿತಿ ಮೇರೆಗೆ ಪಟಾಕಿ ದಾಸ್ತಾನು ಮಾಡಿಕೊಂಡಿದ್ದ ಎರಡು ಗೋಡೌನ್ ಮೇಲೆ ದಾಳಿ, ಸದರಿ ದಾಳಿಯಲ್ಲಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ಆತನ ಕಡೆಯಿಂದ ಸುಮಾರು 9. 15 ಲಕ್ಷ ರೂ.ಮೌಲ್ಯದ ಪಟಾಕಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆ ವ್ಯಕ್ತಿಯ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.
ಈ ಕಾರ್ಯಾಚರಣೆಯನ್ನು ಸಿಸಿಬಿಯ ಮಹಿಳಾ ಸಂರಕ್ಷಣಾ ದಳ ಮತ್ತು ವಿಶೇಷ ವಿಚಾರಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.