SIT ತನಿಖೆ ಹಿಮ್ಮೆಟ್ಟಿಸಲು ಯತ್ನ: ಸಮಾನಮನಸ್ಕ ಸಂಘಟನೆಗಳಿಂದ ಹೋರಾಟಕ್ಕೆ ನಿರ್ಣಯ - Mahanayaka
12:02 AM Thursday 21 - August 2025

SIT ತನಿಖೆ ಹಿಮ್ಮೆಟ್ಟಿಸಲು ಯತ್ನ: ಸಮಾನಮನಸ್ಕ ಸಂಘಟನೆಗಳಿಂದ ಹೋರಾಟಕ್ಕೆ ನಿರ್ಣಯ

dundumejina sabhe
21/08/2025


Provided by

ಮಂಗಳೂರು: ಗುರುತು ಬಹಿರಂಗ ಪಡಿಸದ ಮಾಜಿ ಸ್ವಚ್ಚತಾ ಕಾರ್ಮಿಕ ನೀಡಿದ “ಕೊಂದು ಹಾಕಲಾದ ಅಪರಿಚಿತರ ಹೆಣಗಳನ್ನು ನನ್ನಿಂದ ಬಲವಂತವಾಗಿ ಹೂತು ಹಾಕಿಸಲಾಗಿದೆ” ಎಂಬ ದೂರಿನ ಹಿನ್ನಲೆಯಲ್ಲಿ ರಚಿಸಲಾದ SIT ತನಿಖೆಯ ಕುರಿತು ನಾಡಿನ ಜನತೆಗೆ ನಂಬಿಕೆ ಹಾಗೂ ನಿರೀಕ್ಷೆಗಳಿವೆ. ಬಿಜೆಪಿ ಹಾಗೂ ಪಟ್ಟಭದ್ರ ಶಕ್ತಿಗಳು SIT ತನಿಖೆಯನ್ನು ಸ್ಥಗಿತಗೊಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. SITಯನ್ನು ಒತ್ತಡಕ್ಕೆ ಒಳಪಡಿಸಲು, ದೂರುದಾರರು, ಸಾಕ್ಷಿದಾರನ್ನು ಬೆದರಿಸುವ, ತೇಜೋವಧೆ ನಡೆಸಿ ಹಿಮ್ಮಟ್ಟಿಸುವ ಯತ್ನವೂ ಆಗುತ್ತಿದೆ. ಸರಕಾರ ಇಂತಹ ಪಿತೂರಿ, ಒತ್ತಡಕ್ಕೆ ಒಳಗಾಗದೆ SIT ಅದರ    ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತನಿಖೆ ಸಡೆಸಲು ಅನುವು ಮಾಡಿಕೊಡಬೇಕು.  ಸಾಕ್ಷಿ ದೂರುದಾರನ ಆರೋಪ ಪ್ರತ್ಯೇಕ ಪ್ರಕರಣವಾಗಿದ್ದು, ಆ ದೂರುದಾರನಿಗೂ, ಆತನ ದೂರಿಗೂ ಜನ ಚಳವಳಿಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಆದರೆ, ಆತನ ದೂರು, ಆರೋಪದ ಕುರಿತು ಎಲ್ಲಾ ಆಯಾಮಗಳಲ್ಲಿ ಪ್ರಾಮಾಣಿಕ ತನಿಖೆಯಾಗಬೇಕು ಎಂಬುದು ನಮ್ಮ ಆಗ್ರಹವಾಗಿದೆ. ದೂರುದಾರನಿಗೆ ಈ ನಿಟ್ಟಿನಲ್ಲಿ ಎಡ, ಜಾತ್ಯಾತೀತ, ಜನಪರ ಸಂಘಟನೆಗಳ ನೈತಿಕ ಬೆಂಬಲ ಇರುತ್ತದೆ. ಅದೇ ಸಂದರ್ಭ ಈ ಹಿಂದಿನಿಂದಲು ಚಳವಳಿಗಳು ಆಗ್ರಹಿಸುತ್ತಾ ಬಂದಿರುವ ಬೇಡಿಕೆಗಳ ಮೇಲೆ ಪ್ರಬಲ ಒತ್ತಾಯವನ್ನು ಈ ಸಂದರ್ಭದಲ್ಲಿ ಸರಕಾರದ ಮುಂದೆ ಸ್ಪಷ್ಟವಾಗಿ‌ ಮುಂದಿಡುತ್ತದೆ, ಹೋರಾಟವನ್ನು ಮುಂದುವರಿಸುತ್ತದೆ ಎಂದು ಸಮಾನ ಮನಸ್ಕ ಸಂಘಟನೆಗಳು ಮಂಗಳೂರಿನಲ್ಲಿ ಆಯೋಜಿಸಿದ ದುಂಡು ಮೇಜಿನ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ.

ಪದ್ಮಲತಾ ಪ್ರಕರಣ:   ಧರ್ಮಸ್ಥಳ ಗ್ರಾಮದ ಸಿಪಿಐಎಂ ಶಾಖಾ ಕಾರ್ಯದರ್ಶಿ ಎಂ.ಕೆ.ದೇವಾನಂದರ ಹದಿಹರೆಯದ ಪುತ್ರಿಯನ್ನು1986 ಡಿಸೆಂಬರ್ ತಿಂಗಳಲ್ಲಿ ಅಪಹರಿಸಿ‌ ತಿಂಗಳ ತರುವಾಯ ನೆರಿಯಾ ಹೊಳೆಗೆ ಎಸೆದ ಪ್ರಕರಣದಲ್ಲಿ‌ ಈವರೆಗು ನ್ಯಾಯ ಒದಗಿಸಿಲ್ಲ. ಆ ಸಂದರ್ಭ ಹೋರಾಟಗಳು ನಡೆದು ಸಿಐಡಿ ತನಿಖೆಗೆ ಪ್ರಕರಣವನ್ನು ಒಪ್ಪಿಸಿದರೂ, ಪ್ರಭಾವಗಳಿಗೆ ಮಣಿದು “ಪತ್ತೆಹಚ್ಚಲಾಗದ ಪ್ರಕರಣ ಎಂದು ವರದಿ ನೀಡಿ ಸಿಐಡಿ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಎಂ.ಕೆ.ದೇವಾನಂದರು ಹಲವರ ಹೆಸರು ಉಲ್ಲೇಖಿಸಿ ದೂರು ನೀಡಿದ್ದರೂ ಆ ನಿಟ್ಟಿನಲ್ಲಿ ತನಿಖೆ, ವಿಚಾರಣೆ ನಡೆದಿಲ್ಲ ಎಂಬುದು ಪದ್ಮಲತಾ  ಕುಟುಂಬದ ಆರೋಪ.   ಪದ್ಮಲತಾ ತಂದೆ ಎಂ ಕೆ ದೇವಾನಂದರು ಸ್ಥಳೀಯ ಫ್ಯೂಡಲ್ ಶಕ್ತಿಗಳ ಅಲಿಖಿತ ನಿಯವನ್ನು ಮುರಿದು ಮಂಡಲ ಪಂಚಾಯತ್ ಗೆ ಚುನಾವಣೆಗೆ ಸ್ಪರ್ಧಿಸಿದ್ದು ಮಗಳ ಕೊಲೆಗೆ ಕಾರಣ ಎಂದು ದಿವಂಗತ ದೇವಾನಂದರು ಕೊನೆಯವರೆಗೂ ಹೇಳುತ್ತಾ ಬಂದಿರುತ್ತಾರೆ.

ವೇದವಲ್ಲಿ ಪ್ರಕರಣ: 1979 ರಲ್ಲಿ ಧರ್ಮಸ್ಥಳ ಎಸ್ ಡಿ ಎಮ್ ಅನುದಾನಿತ ಹೈಸ್ಕೂಲಿನಲ್ಲಿ ಅಧ್ಯಾಪಕಿ‌ಯಾಗಿದ್ದ ವೇದವಲ್ಲಿ ಅವರ ಅನುಮಾನಾಸ್ಪದ ಸಾವು ಸಂಭವಿಸುತ್ತದೆ. ನ್ಯಾಯಯುತವಾಗಿ ದೊರಕಬೇಕಾದ ಮುಖ್ಯೋಪಾದ್ಯಾಯಿನಿ ಹುದ್ದೆಗೆ ಹಕ್ಕು ಮಂಡಿಸಿದ್ದಕ್ಕಾಗಿ ಊರಿನ ಫ್ಯೂಡಲ್ ಶಕ್ತಿಗಳು ವೇದವಲ್ಲಿಯವರನ್ನು ಬೆಂಕಿ ಹಚ್ಚಿ ಕೊಲೆ ನಡೆಸಿದರು ಎಂಬುದಾಗಿ ಆಕೆಯ ಕುಟುಂಬಸ್ಥರ ಆರೋಪ. ಆದರೆ, ಬಲಾಢ್ಯ ಶಕ್ತಿಗಳ ಪ್ರಭಾವದಿಂದಾಗಿ ಹೆಂಡತಿಯ ಕೊಲೆಗೆ ನ್ಯಾಯದೊರಕಬೇಕು ಎಂದು ಆಗ್ರಹಿಸಿದ ವೇದವಲ್ಲಿಯವರ ಪತಿ ಡಾ. ಹರಳೆಯರ ಮೇಲೆಯೆ ಸುಳ್ಳು ಆರೋಪ ಹೊರಿಸಿ ಜೈಲಿಗೆ ಹಾಕಲು ಯತ್ನಿಸಲಾಯಿತು. ವೇದವಲ್ಲಿ ಕೊಲೆ ಪ್ರಕರಣವನ್ನು ಆ ಮೂಲಕ ಮುಚ್ಚಿ ಹಾಕಲಾಯಿತು.

ಮಾವುತ ನಾರಾಯಣ, ಆತನ ಸೋದರಿ ಯಮುನಾ ಕೊಲೆ ಪ್ರಕರಣ:  2012 ಸೆಪ್ಟಂಬರ್ ನಲ್ಲಿ ಧರ್ಮಸ್ಥಳದಲ್ಲಿ ಆನೆಮಾವುತ ಆಗಿದ್ದ ನಾರಾಯಣ ಹಾಗು ಆತನ ಸಹೋದರಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ನಡೆಸಲಾಗುತ್ತದೆ. ಆ ಕೊಲೆ ಪ್ರಕರಣವನ್ನು ಪೊಲೀಸ್ ಇಲಾಖೆ ಪತ್ತೆಯಾಗದ ಪ್ರಕರಣ ಎಂದು ವರದಿ ನೀಡಿ ಮುಚ್ಚಿಹಾಕುತ್ತದೆ.   ಆನೆ ಮಾವುತ ನಾರಾಯಣ ವಾಸ ಇದ್ದ ಜಮೀನಿನ ಮೇಲೆ ಊರಿನ ಪ್ರಭಾವಗಳಿಗೆ ಆಸಕ್ತಿ ಇತ್ತು. ಪ್ರಭಾವಿಗಳ ಒತ್ತಡಕ್ಕೆ ಮಣಿಯದ ಕಾರಣ ಈ ಜೋಡಿ ಕೊಲೆ ನಡೆದಿದೆ ಎಂದು ನಾರಾಯಣ ಕುಟುಂಬ ಅಂದಿನಿಂದಲೂ ಆರೋಪಿಸುತ್ತಾ ಬಂದಿದೆ. ಮಾವುತ ನಾರಾಯಣ ವಾಸ ಇದ್ದ ಜಮೀನಿನಲ್ಲಿ ಈಗ ಭವ್ಯ ಕಟ್ಟಡ ತಲೆ ಎತ್ತಿರುವುದು ಆ ಆರೋಪವನ್ನು ಪುಷ್ಟೀಕರಿಸುತ್ತದೆ.

ಸೌಜನ್ಯ ಪ್ರಕರಣ: 2012 ರಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಆರೋಪಪಟ್ಟಿಯಲ್ಲಿ‌ ಆರೋಪಿಯಾಗಿದ್ದ ಸ‌ಂತೋಷ್ ರಾವ್ ನನ್ನು ನ್ಯಾಯಾಲಯ ನಿರಪರಾಧಿ‌ ಎಂದು ಬಿಡುಗಡೆಗೊಳಿಸಿದೆ. ಆ ಮೂಲಕ ಸೌಜನ್ಯ ಕುಟುಂಬ ಹಾಗು ಜನಾಭಿಪ್ರಾಯಕ್ಕೆ ನ್ಯಾಯಲಯದಲ್ಲಿ  ಮನ್ನಣೆ ದೊರಕಿದೆ. ಅಂದಿನಿಂದ ಸೌಜನ್ಯ ಕುಟುಂಬ ಹಾಗು ಜನ ಚಳವಳಿಗಳು, ನಾಗರಿಕ ಸಮಾಜ ಸೌಜನ್ಯ ಪ್ರಕರಣದ ಮರು ತನಿಖೆಗೆ ಬಲವಾದ ಆಗ್ರಹ ಮಾಡುತ್ತಲೆ ಬಂದಿವೆ.

ಭೂಕಬಳಿಕೆ:  ಧರ್ಮಸ್ಥಳ ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಬಳಿಕೆ ಪ್ರಕರಣಗಳು ವ್ಯಾಪಕಾಗಿ ನಡೆದಿರುವ ಆರೋಪ ನಾಲ್ಕೈದು ದಶಕಗಳಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ. ಅಲ್ಲಿ ನಡೆದಿರುವ ಕೊಲೆ ಸಹಿತ ಅಪರಾಧ ಪ್ರಕರಣಗಳನ್ನು ಭೂ ಹಗರಣಗಳಿಂದ ಪ್ರತ್ಯೇಕಿಸಿ ನೋಡಲು ಸಾಧ್ಯವಾಗದು. ಸರಕಾರಿ ಜಮೀನುಗಳ ಕಬಳಿಕೆ, ದಲಿತರು, ಆದಿವಾಸಿಗಳು, ಹಿಂದುಳಿದವರು ಸಹಿತ ದುರ್ಬಲ ವಿಭಾಗದ ಜನರನ್ನು ಬಲವಂತವಾಗಿ ಒಕ್ಕಲೆಬ್ಬಿಸಿದ, ಅವರ ಜಮೀನು ಸ್ವಾಧೀನ ಪಡಿಸಿದ ಆರೋಪಗಳು ಹಲವಾರು‌ ಇವೆ. ಹಾಗೆಯೆ, ಜಮೀನು ಹೊಂದಿರುವ ಹಲವರು ಭಯದಿಂದ ಕೃಷಿ ಚಟುವಟಿಕೆಯನ್ನು ಕೈ ಬಿಟ್ಟು ಊರಿನಿಂದಲೆ ದೂರ ಉಳಿದಿರುವ  ಮಾತುಗಳು ಕೇಳಿ ಬರುತ್ತಿವೆ. ಧರ್ಮಸ್ಥಳ ಹಾಗು ಆಸುಪಾಸಿನ ಗ್ರಾಮದಲ್ಲಿ ನಾಲ್ಕೈದು ದಶಕದಲ್ಲಿ ನಡೆದಿರುವ ಜಮೀನು ಪರಭಾರೆಯನ್ನೂ ಸೇರಿಸಿ, ಭೂಕಬಳಿಕೆ ಆರೋಪಗಳನ್ನು ಸಮಗ್ರವಾದ ತನಿಖೆಗೆ ಒಳಪಡಿಸಬೇಕಿದೆ.

ಮೈಕ್ರೊ ಫೈನಾನ್ಸ್ ಹಗರಣಗಳ ತನಿಖೆ: ಗ್ರಾಮೀಣಾಭಿವೃದ್ದಿ ಯೋಜನೆಯ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಅಪರಾಧ ನಡೆದಿರುವುದು, ಮೈಕ್ರೊ ಫೈನಾನ್ಸ್ ನಡೆಸಿರುವ ಆರೋಪಗಳು ವ್ಯಾಪಕವಾಗಿದೆ. ಸಾಲ ನೀಡಿಕೆ, ವಸೂಲಾತಿ ವಿಧಾನದಲ್ಲಿ ಕಾನೂನು, ನಿಯಮಗಳನ್ನು ಉಲ್ಲಂಘಿಸುವುದು, ತೀರಾ ಅವಮಾನಕಾರಿಯಾಗಿ, ಅಮಾನವೀಯವಾಗಿ ವಸೂಲಾತಿ ನಡೆಸುವ ದೂರುಗಳು ರಾಜ್ಯದ ಹಲವು ಭಾಗಗಳಲ್ಲಿ ಕೇಳಿಬಂದಿವೆ.  ವಸೂಲಾತಿಯ ಸಂದರ್ಭದ ಅಪಮಾನ, ಹಿಂಸೆ ಭರಿಸಲಾಗದೆ ಆತ್ಮಹತ್ಯೆಗಳು ಘಟಿಸಿರುವುದು, ಮರ ಮಟ್ಟು ಸಹಿತ ಅವರ ಸ್ವತ್ತುಗಳನ್ನು ಬಲವಂತವಾಗಿ ಸ್ವಾಧೀನ ಪಡಿಸಿರುವ ಪ್ರಕರಣಗಳು ಹತ್ತಾರು ಸಂಖ್ಯೆಯಲ್ಲಿ ನಡೆದಿದೆ. ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು‌ ದಾಖಲಾಗಿವೆ. ಇವು ಗಂಭೀರವಾದ ಆರ್ಥಿಕ ಅಪರಾಧಗಳಾಗಿವೆ. ಗ್ರಾಮೀಣ ಭಾಗದಲ್ಲಿ ಶ್ರಮಿಕ ಜನರ, ಕೂಲಿಕಾರರ, ಸಣ್ಣ ರೈತರು ಸೇರಿದಂತೆ ಜನ ಸಾಮಾನ್ಯರ ನೆಮ್ಮದಿಗೆ ಭಂಗ ತಂದಿದೆ. ಈ ಕುರಿತು ಸರಿಯಾದ ತನಿಖೆ ಅಗತ್ಯ ಇದೆ.

ಹೀಗೆ, ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಪದ್ಮಲತಾ, ವೇದದಲ್ಲಿ, ಮಾವುತ ನಾರಾಯಣ, ಯಮುನ, ಸೌಜನ್ಯ ಸೇರಿದಂತೆ ಪತ್ತೆಯಾಗದ ಕೊಲೆ ಪ್ರಕರಣಗಳು, ಭೂಕಬಳಿಕೆ, ಮೈಕ್ರೊ ಫೈನಾನ್ಸ್ ದೌರ್ಜನ್ಯಗಳು, ಆರ್ಥಿಕ ಅಪರಾಧದ ಆರೋಪದ ಪ್ರಕರಣಗಳನ್ನು ಪರಿಪೂರ್ಣ ವಾದ ತನಿಖೆಗೆ ಒಳಪಡಿಸಬೇಕು ಎಂಬುದು ನಮ್ಮೆಲ್ಲರ ಒಕ್ಕೊರಲ ಆಗ್ರಹವಾಗಿದೆ. ಮೇಲ್ಕಂಡ ಪ್ರಕರಣಗಳನ್ನು ಈಗ ರಚಿಸಲಾಗಿರುವ SIT ಗೆ ವಹಿಸಲು ಸಮಸ್ಯೆಗಳಿದ್ದಲ್ಲಿ ಪ್ರತ್ಯೇಕವಾದ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಗೆ ಒಳಪಡಿಸಬೇಕು ಎಂದು ಸಮಾನ ಮನಸ್ಕ ಸಂಘಟನೆಗಳು ಆಗ್ರಹಿಸಿದವು.

ಜನಪರ ಸಂಘಟನೆಗಳು ಮಂಗಳೂರು ಅಧ್ಯಕ್ಷತೆ ವಾಸುದೇವ ಉಚ್ಚಿಲ ವಹಿಸಿದ್ದರು. ಪ್ರೊ ನರೇಂದ್ರ ನಾಯಕ್, ನ್ಯಾಯವಾದಿ ಯಶವಂತ ಮರೋಳಿ,  ದಲಿತ ನಾಯಕ ಎಂ.ದೇವದಾಸ್, ಕೃಷ್ಣಾನಂದ ಡಿ, ಕೃಷ್ಣಪ್ಪ ಕೊಣಾಜೆ, ಸಾಮಾಜಿಕ ಹೋರಾಟಗಾರ ಬಿ. ವಿಷ್ಣುಮೂರ್ತಿ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ಆಮ್ ಆದ್ಮಿ ಪಕ್ಷದ ಎಸ್.ಎಲ್.ಪಿಂಟೊ, ಸೀಮಾ ಮಡಿವಾಳ, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಕರುಣಾಕರ ಮಾರಿಪಳ್ಳ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಉಪಾಧ್ಯಕ್ಷ ಸುಕುಮಾರ್ ತೊಕ್ಕೊಟ್ಟು, ರೈತಸಂಘ ಪ್ರಮುಖರಾದ ಕೃಷ್ಣಪ್ಪ ಸಾಲ್ಯಾನ್, ಓಸ್ವಾಲ್ಡ್ ಫೆರ್ನಾಂಡಿಸ್, ಡಿವೈಎಫ್ ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಕರಿಯ ಕೆ., ಕೃಷ್ಣ ಇನ್ನಾ, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ, ಮಾನಸ, ಮಹಿಳಾ ಒಕ್ಕೂಟದ ಮಂಜುಳಾ, ಸುನಂದಾ ಕೊಂಚಾಡಿ, ಅಸುಂತಾ ಡಿ ಸೋಜ, ಕಾರ್ಮಿಕ ಮುಖಂಡರಾದ ಬಿ.ಎಮ್.ಭಟ್, ಈಶ್ವರ ಪದ್ಮುಂಜ, ಯೋಗೀಶ್ ಜಪ್ಪಿನಮೊಗರು, ರಂಗ ಕರ್ಮಿ ಪ್ರಭಾಕರ ಕಾಪಿಕಾಡ್ ಮತ್ತಿತರರು ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ