ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಆಟೋ ರಿಕ್ಷಾ: ಯುವತಿ ಸ್ಥಳದಲ್ಲಿಯೇ ಸಾವು, ಹಲವರಿಗೆ ಗಾಯ

18/09/2023
ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಯುವತಿ ಸ್ಥಳದಲ್ಲಿಯೇ ಮೃತಪಟ್ಟು, ಹಲವರು ಗಾಯಗೊಂಡ ಘಟನೆ ಮಂಗಳೂರಿನ ಗುರುಪುರ-ಬಂಗ್ಲೆಗುಡ್ಡೆ ಅಣೆಬಳಿಯ ಒಳ ರಸ್ತೆಯಲ್ಲಿ ನಡೆದಿದೆ.
ಮೃತ ಯುವತಿಯನ್ನು ಪ್ರೀತಿ ಸಪಲಿಗ (25) ಎಂದು ಗುರುತಿಸಲಾಗಿದೆ. ಪ್ರೀತಿಯವರ ತಾಯಿ ಮೀನಾಕ್ಷಿ (55), ತಂಗಿ ಸ್ವಾತಿ (23), ಅತ್ತಿಗೆ ಶೋಭಾ (37), ಶೋಭಾ ಅವರ ಪುತ್ರ ಭವಿಷ್ (9) ಹಾಗೂ ಆಟೋ ಚಾಲಕ ಪದ್ಮನಾಭ ಎಂಬವರು ಗಾಯಗೊಂಡಿದ್ದಾರೆ. ಮೀನಾಕ್ಷಿ ಅವರ ಸ್ಥಿತಿ ಗಂಭೀರವಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.