ಪೊಲೀಸರ ಸಲಹೆಯನ್ನು ಧಿಕ್ಕರಿಸಿ ಏಕಾಏಕಿ ಸಂಭ್ರಮಾಚರಣೆ ನಡೆಸಲಾಯ್ತೆ? - Mahanayaka

ಪೊಲೀಸರ ಸಲಹೆಯನ್ನು ಧಿಕ್ಕರಿಸಿ ಏಕಾಏಕಿ ಸಂಭ್ರಮಾಚರಣೆ ನಡೆಸಲಾಯ್ತೆ?

rcb
05/06/2025


Provided by

ಬೆಂಗಳೂರು: RCB ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆ 11 ಜನರ ಸಾವು ಹಾಗೂ  ಹಲವಾರು ಮಂದಿ ಗಾಯಗೊಳ್ಳುವುದರೊಂದಿಗೆ ದುಃಖಕರ ಸನ್ನಿವೇಶದಲ್ಲಿ ಮುಕ್ತಾಯವಾಗಿದೆ. ರಾಜ್ಯ ಸರ್ಕಾರ ಪೊಲೀಸರ ಮೇಲೆ ಎಲ್ಲ ಹೊಣೆಯನ್ನು ಹಾಕಿ ಸುಮ್ಮನಾಗಿದೆ. ಇದೇ ವೇಳೆ ಪೊಲೀಸರ ಸಲಹೆಯನ್ನು ಧಿಕ್ಕರಿಸಿ ಏಕಾಏಕಿ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ವ್ಯಾಪಕ ಅನುಮಾನಗಳು ಸೃಷ್ಟಿಯಾಗಿವೆ.

ಐಪಿಎಲ್ ಫೈನಲ್​ನಲ್ಲಿ ಆರ್​ಸಿಬಿ ಗೆಲುವಿಗೆ ಸಂಬಂಧಿಸಿ ಬುಧವಾರ ಯಾವುದೇ ಕಾರ್ಯಕ್ರಮಗಳನ್ನು ನಡೆಸದಂತೆ ಮಂಗಳವಾರ ರಾತ್ರಿಯಿಂದಲೇ ಸರ್ಕಾರ ಮತ್ತು ಫ್ರಾಂಚೈಸಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದೆವು. ಜನರ ಭಾವನೆ, ಉದ್ವೇಗ ತುಸು ತಣ್ಣಗಾದ ನಂತರ ಕಾರ್ಯಕ್ರಮ ಆಯೋಜಿಸುವುದು ಸೂಕ್ತ ಎಂಬ ಸಲಹೆ ನೀಡಿದ್ದೆವು. ಮುಂದಿನ ಭಾನುವಾರ ಕಾರ್ಯಕ್ರಮ ಆಯೋಜಿಸಲು ಶಿಫಾರಸು ಮಾಡಿದ್ದೆವು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಪೊಲೀಸ್ ಅಧಿಕಾರಿಗಳ ಸಲಹೆ ನಂತರವೂ ಸರ್ಕಾರ ಮತ್ತು ಆರ್​ಸಿಬಿ ಆಡಳಿತ ಮಂಡಳಿ ಬುಧವಾರವೇ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಲು ಮುಂದಾದವು ಎಂದು ವರದಿ ತಿಳಿಸಿದೆ. ಆಟಗಾರರು, ವಿಶೇಷವಾಗಿ ವಿದೇಶಿ ಆಟಗಾರರು ಇಂದು ಅಥವಾ ನಾಳೆ ಹೊರಡುತ್ತಾರೆ ಎಂಬುದು ಅವರ ವಾದವಾಗಿತ್ತು ಎಂದು ಹೇಳಲಾಗಿದೆ.

ಸರ್ಕಾರದ ನಿರೀಕ್ಷೆ ಕೇವಲ 30ರಿಂದ 40 ಲಕ್ಷ ಜನರು ಸೇರಬಹುದು ಎಂಬುದಾಗಿತ್ತು. ಆದರೆ 2 ಲಕ್ಷಕ್ಕೂ ಹೆಚ್ಚು ಜನರು ಏಕಾಏಕಿ ಬಂದಿದ್ದಾರೆ. ವಿರಾಟ್ ಕೊಹ್ಲಿಯಂತಹ ಜನಪ್ರಿಯ ಆಟಗಾರರು ಆಗಮಿಸುತ್ತಿರುವ ಸಂದರ್ಭದಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಇನ್ನಷ್ಟು ಅಲರ್ಟ್ ಆಗಿರಬೇಕಿತ್ತು ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಇನ್ನೊಂದೆಡೆ ಮತ್ತೊಮ್ಮೆ ಗೃಹ ಸಚಿವರ ವೈಫಲ್ಯದ ಬಗ್ಗೆಯೂ ಪ್ರಶ್ನೆಗಳು ಕೇಳಿ ಬಂದಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ