ಬೆಂಗಳೂರಿನಲ್ಲಿ ಶೀಘ್ರದಲ್ಲೇ 'ಬ್ಯಾರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರಾರಂಭ: ಸ್ಪೀಕರ್ ಯು.ಟಿ. ಖಾದರ್ - Mahanayaka
11:53 AM Wednesday 5 - November 2025

ಬೆಂಗಳೂರಿನಲ್ಲಿ ಶೀಘ್ರದಲ್ಲೇ ‘ಬ್ಯಾರಿ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಪ್ರಾರಂಭ: ಸ್ಪೀಕರ್ ಯು.ಟಿ. ಖಾದರ್

barry credit co-operative society
05/11/2025

ಬೆಂಗಳೂರು: ದೂರದ ಕರಾವಳಿಯಿಂದ ಬೆಂಗಳೂರಿಗೆ ಉದ್ಯೋಗ ಮತ್ತು ವಿವಿಧ ಉದ್ದೇಶಗಳಿಗಾಗಿ ಬಂದು ನೆಲೆಸಿರುವ ಬ್ಯಾರಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಕೋನದಿಂದ ಬೆಂಗಳೂರಿನಲ್ಲಿ ಅತೀ ಶೀಘ್ರದಲ್ಲೇ ‘ಬ್ಯಾರಿ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ’ಯ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಬ್ಯಾರಿ ಸಮುದಾಯದ ಎಲ್ಲ ಮುಖಂಡರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.

ಮಂಗಳವಾರ ಸಂಜೆ 5ಕ್ಕೆ ಬೆಂಗಳೂರಿನ ಮೆಜೆಸ್ಟಿಕ್‌ ನಲ್ಲಿರುವ ಹಿಂದೂಸ್ತಾನ್ ಕಾಂಪ್ಲೆಕ್ಲ್‌ ನಲ್ಲಿ ಬ್ಯಾರಿಸ್ ಸೆಂಟ್ರಲ್ ಕಮಿಟಿ(ಬಿಸಿಸಿ)ಯ ನೂತನ ಕಚೇರಿಯನ್ನು ಉದ್ಘಾಟನೆ ಮಾಡಿ  ಮಾತನಾಡಿದ ಅವರು, ಕರಾವಳಿಯ ಬ್ಯಾರಿ ಸಮುದಾಯ ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳುವವರು. ಇತ್ತೀಚಿನ ವರ್ಷಗಳಲ್ಲಿ ಸಮುದಾಯದ ಯುವಕರು ಬೆಂಗಳೂರಿಗೆ ಉದ್ಯೋಗ, ವ್ಯಾಪಾರ ಸೇರಿದಂತೆ ನಾನಾ ಉದ್ದೇಶಗಳಿಗಾಗಿ ಬಂದು ತಮ್ಮದೇ ಅಸ್ತಿತ್ವವನ್ನು ಕಂಡುಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ. ನಾನು ರಾಜಕೀಯದಲ್ಲಿ ಸ್ಪೀಕರ್ ಹುದ್ದೆಗೆ ಏರುವುದಕ್ಕೆ ನಮ್ಮ ಬ್ಯಾರಿ ಸಮುದಾಯವು ಸೇರಿದಂತೆ ಎಲ್ಲ ವರ್ಗದ ಜನರ ಪ್ರೀತಿ ವಿಶ್ವಾಸದ ಜೊತೆಗೆ ಹಿರಿಯರ ಆಶೀರ್ವಾದವೂ ಕಾರಣ. ಸಮುದಾಯದ ಯುವಕರೇ ಕಟ್ಟಿಕೊಂಡಿರುವ ಬ್ಯಾರಿಸ್ ಸೆಂಟ್ರಲ್ ಕಮಿಟಿ(ಬಿಸಿಸಿ)ಯು ಬೆಂಗಳೂರಿನಲ್ಲಿರುವ ಬ್ಯಾರಿ ಸಮುದಾಯದ ಎಲ್ಲ ಕಷ್ಟಕ್ಕೆ ತಮ್ಮ ನಿಭಿಡತೆಯ ಮಧ್ಯೆಯೂ ಸ್ಪಂದಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಸಮುದಾಯದ ಏಳಿಗೆಗಾಗಿ ದುಡಿಯುತ್ತಾ, ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸುತ್ತಿದೆ ಎಂಬುದಕ್ಕೆ ಕಳೆದ ವರ್ಷ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬ್ಯಾರಿ ಕೂಟವೇ ಸಾಕ್ಷಿ ಎಂದು ಸ್ಪೀಕರ್ ಶ್ಲಾಘಿಸಿದರು.

ತಮ್ಮ ಭಾಷಣದಲ್ಲಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಡಿರುವ ಅಕ್ರಮದ ಆರೋಪಗಳ ಕುರಿತಾಗಿ ಮಾತನಾಡಿದ ಯು ಟಿ ಖಾದರ್, “ಬ್ಯಾರಿ ಸಮುದಾಯದ ಹೆಸರನ್ನು ಯಾವತ್ತೂ ಕೆಡಿಸಿಲ್ಲ. ಟೀಕೆ ಮಾಡುವವರು ಮಾಡುತ್ತಲೇ ಇರುತ್ತಾರೆ, ಕೆಲಸಗಳು ನೆನಪಿನಲ್ಲಿರುತ್ತದೆ. ವಿಧಾನಸೌಧದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಕ್ಕೆ ಇವತ್ತು ಟೀಕೆಗಳು ಬರುತ್ತಿವೆ. ವಿಧಾನಸೌಧದಲ್ಲಿ ಪಾಳುಬಿದ್ದಿದ್ದ ಬಾಗಿಲನ್ನು ಸರಿ ಮಾಡಿಸಿದ್ದಕ್ಕೆ ಇವತ್ತು ಕೆಲವರು ಪ್ರಶ್ನಿಸುತ್ತಿದ್ದಾರೆ. ಊಟ ಕೊಟ್ಟದ್ದನ್ನೂ ಈಗ ಪ್ರಶ್ನಿಸುತ್ತಿದ್ದಾರೆ.  ತಿನ್ನುವಾಗ ಯಾರೂ ಕೇಳಿರಲಿಲ್ಲ. ಟೀಕೆ ಮಾಡುವವರಿಗೆಲ್ಲ ಯಾರು ಉತ್ತರ ಕೊಟ್ಟುಕೊಂಡು ಹೋಗೋದು? ಕೆಲಸ ಮಾಡುವುದಕ್ಕೆ ಶ್ರಮ, ಯೋಚನೆ, ಯೋಜನೆಯ ಅಗತ್ಯವಿದೆ. ಆದರೆ, ಟೀಕೆ ಮಾಡುವುದಕ್ಕೆ ಇವ್ಯಾವುದೂ ಬೇಕಿಲ್ಲ. ನಾನು ಯಾವತ್ತೂ ಕೂಡ ಬ್ಯಾರಿ ಸಮುದಾಯದ ಹೆಸರನ್ನು ಕೆಡಿಸಿಲ್ಲ, ಇನ್ನು ಮುಂದೆಯೂ ಕೆಡಿಸಲ್ಲ. ಈ ಬಗ್ಗೆ ಈಗಾಗಲೇ ನನ್ನ ಕ್ಷೇತ್ರದ ಜನರ ಸಹಿತ ಎಲ್ಲರಲ್ಲಿಯೂ ತಿಳಿಸಿದ್ದೇನೆ” ಎಂದು ತಿಳಿಸಿದರು.

ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿರುವ ಎಂ.ಎ.ಗಫೂರ್ ಹಾಗೂ ಕಾರ್ಮಿಕರ ಕನಿಷ್ಠ ವೇತನ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಹಿದ್ ತೆಕ್ಕಿಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷ್ಯತೆಯನ್ನು ವಹಿಸಿದ್ದ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾದ ಶಬೀರ್ ಬ್ರಿಗೇಡ್ ಮಾತನಾಡಿದರು. ಇದೇ ವೇಳೆ  ಸ್ಪೀಕರ್ ಯು.ಟಿ.ಖಾದರ್ ಅವರು 2ನೇ ವರ್ಷದ ಬ್ಯಾರಿ ಕೂಟದ ಪೋಸ್ಟರ್ ಹಾಗೂ ಬಿಸಿಸಿಯ ನೂತನ ಲೋಗೋವನ್ನು ಇದೇ ವೇಳೆ ಬಿಡುಗಡೆಗೊಳಿಸಿದರು.

ವಿಶೇಷ ಆಹ್ವಾನಿತರಾಗಿದ್ದ ಬೆಂಗಳೂರಿನ ಬ್ಯಾರಿ ಸಮುದಾಯದ ಹಿರಿಯ ವಕೀಲರಾದ ಕಮಾಲ್, ಅಡ್ವೊಕೇಟ್ ಮುಝಫ್ಫರ್ ಅಹ್ಮದ್, ಬೆಂಗಳೂರಿನ ಸುಲ್ತಾನ್ ಗೋಲ್ಡ್ ನಿರ್ದೇಶಕರಾದ ರಿಯಾಝ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಉಮರ್ ಯು ಹೆಚ್, ಸ್ಥಳೀಯ ಮಸೀದಿಯ ಗುರುಗಳಾದ ಶಾಫಿ ಸಅದಿ, ಹಿಂದುಸ್ತಾನ್ ಹೋಟೆಲ್ ಮಾಲೀಕರಾದ ಸೈಯ್ಯದ್  ಮುಖ್ತಾರ್ ಅಹ್ಮದ್, ನಿವೃತ್ತ ಎಸಿಪಿ ಬಶೀರ್ ಅಹ್ಮದ್, ಎಂಎಂವೈಸಿಯ ಅಧ್ಯಕ್ಷರಾದ ಅಬೂಬಕ್ಕರ್, ಬಿಸಿಸಿಯ ಉಪಾಧ್ಯಕ್ಷ ಗಫೂರ್ ಕೆಂಟ್, ಹನೀಫ್ ಖಾನ್ ಕೊಡಾಜೆ, ಬ್ಯಾರೀಸ್ ವೆಲ್‌ ಫೇರ್ ಅಸೋಸೊಯೇಷನ್‌ನ ವಹೀದ್ ವಸಂತ ನಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪತ್ರಕರ್ತ ಬಶೀರ್ ಅಡ್ಯನಡ್ಕ ಅವರು ನಿರೂಪಿಸಿದರು. ಬಿಸಿಸಿಯ ಕಾರ್ಯಕಾರಿ ಸಮಿತಿಯ ಸದಸ್ಯ ಅಡ್ವೊಕೇಟ್ ಕಲಂದರ್ ಕೊಯಿಲ ಸ್ವಾಗತಿಸಿದರು. ಸವಾದ್ ಆರ್.ಟಿ. ನಗರ ಧನ್ಯವಾದ ಸಲ್ಲಿಸಿದರು. ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ನಾಸಿರ್ ಕೆಂಪಿ ಸೇರಿದಂತೆ ಹಲವು ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ