ಜೇನುಗೂಡಿಗೆ ಬಡಿದ ಚೆಂಡು: ಕ್ರಿಕೆಟ್ ಮೈದಾನದಲ್ಲಿದ್ದವರನ್ನು ಅಟ್ಟಾಡಿಸಿ ದಾಳಿ ಮಾಡಿದ ಜೇನುನೊಣ!

05/02/2024
ಉಳ್ಳಾಲ: ಕ್ರಿಕೆಟ್ ಪಂದ್ಯಾಟದ ವೇಳೆ ಬ್ಯಾಟ್ಸ್’ಮೆನ್ ಹೊಡೆದ ಚೆಂಡು ಮರದಲ್ಲಿದ್ದ ಜೀನಿನ ಗೂಡಿಗೆ ತಾಗಿದ್ದು, ಇದರಿಂದ ರೊಚ್ಚಿಗೆದ್ದ ಜೇನುನೊಣಗಳು ಕ್ರಿಕೆಟ್ ಗ್ರೌಂಡ್ ನಲ್ಲಿದ್ದವರ ಮೇಲೆ ಅಟ್ಟಾಡಿಸಿ ದಾಳಿ ನಡೆಸಿದ ಘಟನೆ ಉಳ್ಳಾಲದ ಒಂಭತ್ತುಕೆರೆ ಸಮೀಪ ನಡೆದಿದೆ.
ಭಾನುವಾರ ಸೋಮವೇಶ್ವರದ ಒಂಭತ್ತುಕೆರೆಯ ಅನಿಲ ಕಾಂಪೌಂಡ್ ಎಂಬಲ್ಲಿ ಸ್ಥಳೀಯರು ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದರು. ಈ ವೇಳೆ ಈ ಘಟನೆ ನಡೆದಿದೆ.
ಕ್ರಿಕೆಟ್ ಗ್ರೌಂಡ್ ಗೆ ಸಮೀಪವಿದ್ದ ತೆಂಗಿನ ಮರದಲ್ಲಿ ಜೇನುಗೂಡು ಕಟ್ಟಿತ್ತು. ಜೇನುಗೂಡಿಗೆ ಚೆಂಡು ಬಡಿದ ಕೆಲವೇ ಕ್ಷಣಗಳಲ್ಲಿ ಕ್ರಿಕೆಟ್ ಮೈದಾನವನ್ನು ಆಕ್ರಮಿಸಿಕೊಂಡ ಜೇನುನೊಣಗಳು ಬ್ಯಾಟ್ಸ್’ಮೇನ್ ಸಹಿತ ಎಲ್ಲ ಆಟಗಾರರ ಮೇಲೆ ದಾಳಿ ನಡೆಸಿದೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜೇನುನೊಣಗಳ ದಾಳಿಯಿಂದ ತಪ್ಪಿಸಿಕೊಂಡು ಆಟಗಾರರು ಓಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಜೇನುನೊಣಗಳ ದಾಳಿಯಿಂದಾಗಿ ಕೊನೆಗೆ ಪಂದ್ಯಾಟವನ್ನು ರದ್ದುಗೊಳಿಸಲಾಗಿದೆ.