ಇದೆಂಥಾ ಅಮಾನವೀಯತೆ: ಚೀಲದಲ್ಲಿ ಮಗನ ಮೃತದೇಹ ತುಂಬಿ ತಂದೆಯ ಕೈಯಲ್ಲಿ ಕೊಟ್ಟ ಅಧಿಕಾರಿಗಳು! - Mahanayaka
8:19 AM Tuesday 16 - September 2025

ಇದೆಂಥಾ ಅಮಾನವೀಯತೆ: ಚೀಲದಲ್ಲಿ ಮಗನ ಮೃತದೇಹ ತುಂಬಿ ತಂದೆಯ ಕೈಯಲ್ಲಿ ಕೊಟ್ಟ ಅಧಿಕಾರಿಗಳು!

belagavi
08/08/2024

ಬೆಳಗಾವಿ: ಛೆ..! ಇವರೆಂಥಾ ಅಧಿಕಾರಿಗಳು, ಇವರಿಗೂ ಕುಟುಂಬ, ಮಕ್ಕಳು, ಸಂಸಾರ ಅನ್ನೋದು ಇಲ್ವಾ..! ಈ ರೀತಿಯ ಅಮಾನವೀಯತೆ ಯಾರ ಬಳಿಯೂ ತೋರಬಾರದು ಅನ್ನೋ ಮಾತು ಬೆಳಗಾವಿ ತಾಲ್ಲೂಕಿನ ನಾವಗೆ ಗ್ರಾಮದಲ್ಲಿ ಕೇಳಿ ಬಂದಿದೆ.


Provided by

ಹೌದು..! ಅಗ್ನಿ ಅವಘಢದಲ್ಲಿ ಮಗ ಸಾವನ್ನಪ್ಪಿದ ನೋವಿನಲ್ಲಿದ್ದ ತಂದೆಯ ಕೈಗೆ ಚೀಲವೊಂದರಲ್ಲಿ ಮಗನ ಮೃತದೇಹ ತುಂಬಿ ಕಳುಹಿಸಿದ ಅಮಾನವೀಯ ಘಟನೆ ತಾಲ್ಲೂಕಿನ ನಾವಗೆ ಗ್ರಾಮದಲ್ಲಿ ನಡೆದಿದೆ.

ನಾವಗೆ ಗ್ರಾಮದ ಕಾರ್ಖಾನೆಯ ಅಗ್ನಿ ಅವಘಡದಲ್ಲಿ ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ (20) ಅವರ ದೇಹದ ಅವಶೇಷಗಳನ್ನು, ಅಧಿಕಾರಿಗಳು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ತಂದೆಯ ಕೈಗೆ ಕೊಟ್ಟು ಕಳುಹಿಸಿದ್ದಾರೆ.

ಸುಟ್ಟುಹೋದ ಮಗನ ದೇಹದ ಅಲ್ಪಸ್ವಲ್ಪ ಅಂಗಾಂಗಗಳನ್ನು ತಂದೆ ಸಣ್ಣಗೌಡ ಅವರು, ಸಂತೆಗೆ ಬಳಸುತ್ತಿದ್ದ ಕೈಚೀಲದಲ್ಲಿ ಹಾಕಿಕೊಂಡು ಮನೆ ಕಡೆಗೆ ಹೊರಟರು. ದಾರಿಯುದ್ದಕ್ಕೂ ಇನ್ನಿಲ್ಲದಂತೆ ದುಃಖಿಸುತ್ತಿದ್ದ ಅವರ ಪರಿಸ್ಥಿತಿ ಚಿಂತಾಜನಕವಾಗಿತ್ತು.

ಅವಘಡದಲ್ಲಿ ಮೃತಪಟ್ಟ ಯುವಕನ ಮೃತದೇಹಕ್ಕೆ ಜಿಲ್ಲಾಡಳಿತ ಸ್ವಲ್ವವೂ ಗೌರವ ನೀಡಲಿಲ್ಲ. ಕೈಚೀಲದಲ್ಲಿ ತರಕಾರಿಗಳನ್ನು ನೀಡುವಂತೆ ಮೃತದೇಹದ ಅವಶೇಷಗಳನ್ನು ನೀಡಿದೆ. ಸ್ಥಳದಲ್ಲಿ ಆ್ಯಂಬುಲೆನ್ಸ್ ಗಳಿದ್ದರೂ, ಮೃತದೇಹವನ್ನು ಸಾಗಿಸದೇ ಈ ರೀತಿಯ ಅಮಾನವೀಯತೆ ಮೆರೆಯಲಾಗಿದೆ.

ಸಣ್ಣಗೌಡ ಅವರ ನಾಲ್ವರು ಮಕ್ಕಳಲ್ಲಿ ಯಲ್ಲಪ್ಪ ಒಬ್ಬನೇ ಗಂಡುಮಗ, ಉಳಿದ ಮೂವರು ಹೆಣ್ಣುಮಕ್ಕಳಿದ್ದಾರೆ. ಪಿಯುಸಿ ಮುಗಿದ ಯಲ್ಲಪ್ಪ ತಂದೆಯ ಕಷ್ಟಕ್ಕೆ ನೆರವಾಗಲು ಓದನ್ನು ಅರ್ಧಕ್ಕೆ ನಿಲ್ಲಿಸಿ, ಕಾರ್ಖಾನೆಗೆ ಕೆಲಸಕ್ಕೆ ಸೇರಿದ್ದ. ಕೆಲಸಕ್ಕೆ ಸೇರಿ ಕೇವಲ ಮೂರು ತಿಂಗಳಾಗಿತ್ತು. ತಿಂಗಳಿಗೆ 12 ಸಾವಿರದಂತೆ ಎರಡು ಸಂಬಳ ಮಾತ್ರ ತೆಗೆದುಕೊಂಡಿದ್ದ.

ಮನೆಯವರ ಕಷ್ಟಕ್ಕೆ ಹೆಗಲು ನೀಡಬೇಕು ಎಂದು ಹೋಗಿದ್ದ ಯಲ್ಲಪ್ಪ, ಕುಟುಂಬದ ಜವಾಬ್ದಾರಿ ವಹಿಸುವುದಕ್ಕೂ ಮುನ್ನ ದುರಂತಕ್ಕೀಡಾಗಿದ್ದಾನೆ. ಕುಟುಂಬಸ್ಥರ ಮೂಕರೋದನೆ ಯಾರ ಕಿವಿಗಾದರೂ ತಟ್ಟೀತೇ? ಮಗನನ್ನು ಸುಟ್ಟ ಬೆಂಕಿಗಿಂತಲೂ, ಚೀಲದಲ್ಲಿ ಮಗನ ಮೃತದೇಹವನ್ನು ತುಂಬಿಕೊಟ್ಟ ಅಧಿಕಾರಿಗಳು ಅತ್ಯಂತ ಕಠೋರವಾಗಿ ಕಾಣಿಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ