ಕುತೂಹಲ ಸೃಷ್ಟಿಸಿದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ: ಸ್ಪರ್ಧೆಯಿಂದ ಹಿಂದಕ್ಕೆ ಸರಿದ ಹಿರಿಯ ಕಾಂಗ್ರೆಸ್ ನಾಯಕ!
ಬೆಳ್ತಂಗಡಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಶಾಸಕ ಹಿರಿಯ ಕಾಂಗ್ರೆಸ್ ಮುಖಂಡ ಕೆ.ವಸಂತ ಬಂಗೇರ ಅವರು ಹೇಳಿದ್ದಾರೆ.
ಬೆಳ್ತಂಗಡಿಯಲ್ಲಿ ಇಂದು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ತಾನು ವಿಧಾನಸಭಾ ಟಿಕೆಟ್ ಗಾಗಿನ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದರು.
ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಇದರಿಂದಾಗಿ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ ಅವರು ಬೆಂಬಲಿಗರು ಅಭಿಮಾನಿಗಳು ಯಾವುದೇ ಗೊಂದಲಕ್ಕೆ ಒಳಗಾಗುವುದು ಬೇಡ ಕಾಂಗ್ರೆಸ್ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವುದೇ ತನ್ನ ಗುರಿಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮುಂದಿನ ಚುನಾವಣೆಯಲ್ಲಿ ಯಾರಿಗೆ ಟಿಕೇಟು ನೀಡಿದರೂ ಅವರ ಪರವಾಗಿ ಪ್ರಾಮಾಣಿಕತೆಯಿಂದ ಚುನಾವಣೆಯಲ್ಲಿ ಕೆಲಸ ಮಾಡಲಿರುವುದಾಗಿ ತಿಳಿಸಿದರು.
ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಕೆ.ಗಂಗಾಧರ ಗೌಡ ಅವರು ಟಿಕೇಟು ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಟಿಕೇಟು ಸಿಕ್ಕಿದರೆ ಸಂತೋಷ ಎಂದ ಅವರು ಪಕ್ಷ ಯಾರನ್ನು ಆಯ್ಕೆ ಮಾಡುತ್ತದೋ ಅವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಪಕ್ಷದಲ್ಲಿ ಟಿಕೇಟಿಗಾಗಿ ಇಬ್ಬರು ಅರ್ಜಿವಸಲ್ಲಿಸಿದ್ದಾರೆ ಇವರಲ್ಲಿ ಯಾರಿಗೆ ಟಿಕೇಟು ಸಿಕ್ಕಿದರೂ ಎಲ್ಲರನ್ನೂ ಒಟ್ಟು ಸೇರಿಸಿಕೊಂಡು ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವನ್ನು ಪಡೆಯುವುದೇ ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಇದೀಗ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪಕ್ಷದ ರಾಜಕೀಯ ಚಿತ್ರಣವೇ ಬದಲಾಗಿದ್ದು ಟಿಕೇಟಿಗಾಗಿ ಇದೀಗ ಕೆ.ಗಂಗಾಧರ ಗೌಡ ಹಾಗೂ ರಕ್ಷಿತ್ ಶಿವರಾಂ ಅವರು ಮಾತ್ರ ಕಣದಲ್ಲಿದ್ದಾರೆ. ಇವರಲ್ಲಿ ಯಾರಿಗೆ ಟಿಕೇಟು ಎಂಬುದು ಕುತೂಹಲದ ವಿಚಾರವಾಗಿದೆ.
ಐದು ದಶಕಗಳ ರಾಜಕೀಯ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರು ಕಳೆದ ಐದು ದಶಕಗಳಿಂದ ಬೆಳ್ತಂಗಡಿಯ ರಾಜಕೀಯದಲ್ಲಿ ಸಕ್ರಿಯರಾಗಿದ್ದವರು. 1983ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲಬಾರಿಗೆ ವಿಧಾನಸಭಾ ಚುನಾವಣಾ ಕಣಕ್ಕೆ ಇಳಿದ ವಸಂತ ಬಂಗೇರ ಅವರು ಮೊದಲ ಪ್ರಯತ್ನದಲ್ಲಿಯೇ ಗೆಲುವನ್ನು ಕಂಡವರು.
ಅಲ್ಲಿಂದ ಮುಂದೆ ವಸಂತ ಬಂಗೇರರಿಲ್ಲದ ಚುನಾವಣೆಯೇ ಬೆಳ್ತಂಗಡಿಯಲ್ಲಿ ನಡೆದಿಲ್ಲ ಪ್ರತಿಚುನಾವಣೆಯಲ್ಲಿಯೂ ಬಂಗೇರರೇ ಚುನಾವಣೆಯ ಆಕರ್ಷಣೆಯಾಗಿದ್ದರು. ಐದು ಬಾರಿ ಚುನಾವಣೆಗಳಲ್ಲಿ ಗೆದ್ದು ಶಾಸಕರಾದ ಬಂಗೇರ ಅವರು ಬಿಜೆಪಿ, ಜನತಾದಳ ಹಾಗೂ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಇದೀಗ ಬಂಗೇರ ಅವರು ವಿಧಾನ ಸಭಾ ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























