12:43 AM Saturday 23 - August 2025

ಫೈಬರ್ ಪರಶುರಾಮ ಮೂರ್ತಿ ಸ್ಥಾಪಿಸಿ ನಂಬಿಕೆ ದ್ರೋಹ:  ಸುನಿಲ್ ಕುಮಾರ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

v sunil kumar
17/10/2023

ಕಾರ್ಕಳ: ಪರಶುರಾಮನ ಕಂಚಿನ ಪ್ರತಿಮೆ ಸ್ಥಾಪಿಸುವುದಾಗಿ ನಂಬಿಸಿ ಫೈಬರ್ ಪ್ರತಿಮೆ ಸ್ಥಾಪಿಸುವ ಮೂಲಕ ಜನತೆಗೆ ‘ನಂಬಿಕೆ ದ್ರೋಹ’ ಎಸಗಿದ ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿರುದ್ಧ ಕಾರ್ಕಳ ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್‌ ನೇತೃತ್ವದಲ್ಲಿ ಸೋಮವಾರ ಕಾರ್ಕಳ ತಾಲೂಕು ಬೈಲೂರಿನ ಉಮಿಕಲ್ ಬೆಟ್ಟದ ಬುಡದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಾಜಿ ಸಚಿವ ವಿನಯ ಕುಮಾರ್ ಮಾತನಾಡಿ, ಬಿಜೆಪಿ ಜನಪ್ರತಿನಿಧಿಗಳು ಹಿಂದುತ್ವದ ಹೆಸರಿನಲ್ಲಿ ಮಾಡಿದ ಲೂಟಿ- ಭ್ರಷ್ಟಾಚಾರವನ್ನು ಬೆಳಕಿಗೆ ತರುವ ಕೆಲಸವನ್ನು ನಾವು ಮಾಡುತಿದ್ದೇವೆ. ಬ್ರಹ್ಮಾವರದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ಬಿಜೆಪಿ ನಾಯಕನ ನೇತೃತ್ವದ ಆಡಳಿತ ಮಂಡಳಿ 15 ಕೋಟಿ ರೂ.ಗಳಿಗೂ ಅಧಿಕ ಅವ್ಯವಹಾರ ನಡೆಸಿದೆ. ಉಮಿಕಲ್ ಬೆಟ್ಟದ ತುದಿಯಲ್ಲಿ ಪರಶುರಾಮ ಥೀಮ್ ಪಾರ್ಕ್ ಹಾಗೂ ಪರಶುರಾಮನ ಕಂಚಿನ ಮೂರ್ತಿ ಸ್ಥಾಪನೆ ಹೆಸರಿನಲ್ಲಿ ಶಾಸಕರು ಮಾಡಿ ಮಹಾವಂಚನೆ ಎಸಗಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮುಖಂಡ ಹಾಗೂ ನ್ಯಾಯವಾದಿ ಸುಧೀರ್‌ ಕುಮಾರ್ ಮುರೋಳ್ಳಿ ದಿಕ್ಸೂಚಿ ಭಾಷಣ ಮಾಡಿ, ಪರಶುರಾಮನ ನಕಲಿ ಮೂರ್ತಿ ಪ್ರತಿಷ್ಠಾಪಿ ಸುವ ಮೂಲಕ ಕಾರ್ಕಳದ ಶಾಸಕರು ಸಾವಿರಾರು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಉದಯಕುಮಾರ್ ಶೆಟ್ಟಿ ಮುನಿಯಾಲು, ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಕೊಡವೂರು, ಚಿಕ್ಕಮಗಳೂರು ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಡಾ. ಅಂಶುಮನ್, ಕಾಂಗ್ರೆಸ್ ಮುಖಂಡರಾದ ವಿಕಾಸ್ ಹೆಗ್ಡೆ, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್‌ರಾಜ್ ಕಾಂಚನ್, ಡಿ.ಆರ್ ರಾಜು, ಕಿಶನ್ ಹೆಗ್ಡೆ ಕೊಳ್ಕೆಬೈಲು, ಚಂದ್ರಶೇಖರ ಬಾಯರಿ, ಸದಾಶಿವ ದೇವಾಡಿಗ, ದೀಪಕ್ ಕೋಟ್ಯಾನ್, ಮಹಿಳಾ ಕಾಂಗ್ರೆಸ್ ನಾಯಕಿ ಅನಿತಾ ಡಿಸೋಜ ಮುಂತಾದ ವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

Exit mobile version