ರಸ್ತೆಯ ಗುಂಡಿಗೆ ಬಿದ್ದ ಬೈಕ್ ಸವಾರ ಸಾವಿನ ದವಡೆಯಿಂದ ಸ್ವಲ್ಪದರಲ್ಲೇ ಮಿಸ್: ಬೆಚ್ಚಿಬೀಳಿಸಿದ ಘಟನೆ

ಮಂಗಳೂರು: ಬೈಕ್ ಸವಾರನೊಬ್ಬ ಸಾವಿನ ದವಡೆಯಿಂದ ಸ್ವಲ್ಪದರಲ್ಲೇ ಪರಾಗಿರುವ ಘಟನೆ ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿಯ ನಂತೂರು ಬಳಿ ನಡೆದಿದೆ.
ಸದ್ಯ ಈ ಘಟನೆಯ ಭೀಕರ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ರಸ್ತೆ ಹೊಂಡಗಳು ಕೇವಲ ಬೆಂಗಳೂರಿನಲ್ಲಿ ಮಾತ್ರವೇ ಸಮಸ್ಯೆ ಅಲ್ಲ ಮಂಗಳೂರಿನಾದ್ಯಂತ ರಸ್ತೆ ಗುಂಡಿಯಿಂದಾಗಿ ದಿನ ನಿತ್ಯ ಅಪಘಾತಗಳಾಗುತ್ತಿವೆ ಎನ್ನುವುದಕ್ಕೆ ಈ ಘಟನೆಯೇ ಸ್ಪಷ್ಟ ಉದಾಹರಣೆಯಾಗಿದೆ.
ವಿಡಿಯೋದಲ್ಲಿ ಕಂಡು ಬರುವಂತೆ ಬೈಕ್ ಸವಾರ ಕಾರೊಂದನ್ನು ಓವರ್ ಟೇಕ್ ಮಾಡಲು ಮುಂದಾಗುತ್ತಾನೆ. ಓವರ್ ಟೇಕ್ ವೇಳೆ ಬೈಕ್ ನ್ನು ವೇಗವಾಗಿ ಚಲಾಯಿಸುತ್ತಿರುವಾಗಲೇ ರಸ್ತೆಯಲ್ಲೇ ಏಕಾಏಕಿ ಸಾಲು ಸಾಲು ಗುಂಡಿಗಳು ಎದುರಾಗಿದ್ದು, ಗುಂಡಿಗೆ ಬಿದ್ದ ಬೈಕ್ ಸ್ಕಿಡ್ ಆಗಿ ಸವಾರ ರಸ್ತೆಗೆ ಬಿದ್ದಿದ್ದಾನೆ. ಈ ವೇಳೆ ಬೈಕ್ ಸವಾರನ ಹಿಂದಿನಿಂದ ಬರುತ್ತಿದ್ದ ಬಸ್ ಆತನ ಮೇಲೆ ಹರಿಯುವುದು ಸ್ವಲ್ಪದರಲ್ಲೇ ಮಿಸ್ ಆಗಿದೆ.
ರಾಜಲಕ್ಷ್ಮೀ ಎಂಬ ಖಾಸಗಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬೈಕ್ ಸವಾರನ ಪ್ರಾಣ ಉಳಿದಿದೆ. ಬಸ್ ನಲ್ಲಿ ಅಳವಡಿಸಿದ್ದ ಕ್ಯಾಮರಾದಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ.
ಮಂಗಳೂರಿನಾದ್ಯಂತ ಹಲವು ರಸ್ತೆಗಳ ನಡುವೆ ಇಂತಹ ಗುಂಡಿಗಳು ಏರ್ಪಟ್ಟಿವೆ ನಂತೂರಿನಿಂದ ಬೈಕಂಪಾಡಿ ನಡುವೆ ಅಲ್ಲಲ್ಲಿ ರಸ್ತೆ ಗುಂಡಿಗಳನ್ನು ಕಾಣಬಹುದು. ಇನ್ನೊಂದೆಡೆಯಲ್ಲಿ ಮಂಗಳೂರು ಮೂಡುಬಿದಿರೆ ರಸ್ತೆಯಲ್ಲಿ ಸಾಗುವ ವೇಳೆ ಕುಲಶೇಖರ ರಸ್ತೆಯಂತೂ ಗುಂಡಿಗಳ ತಾಣವಾಗಿದೆ. ಮೊದಲೇ ಕಿರಿದಾದ ರಸ್ತೆ ಇದಾಗಿದೆ. ಈ ಕಿರಿದಾದ ರಸ್ತೆಯ ತುಂಬಾ ಗುಂಡಿಗಳದ್ದೇ ಕಾರುಬಾರು ಎಂಬಂತಾಗಿದೆ. ಸಂಬಂಧಪಟ್ಟವರು ಇನ್ನೂ ಈ ಬಗ್ಗೆ ಕ್ರಮಕ್ಕೆ ಮುಂದಾಗಿಲ್ಲ ಎನ್ನುವ ಆಕ್ರೋಶ ಕೇಳಿ ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD