ಬಿಜೆಪಿ ಗೋವುಗಳ ರಕ್ಷಣೆ ಮಾಡುತ್ತಿಲ್ಲ | ಗಂಭೀರ ಆರೋಪ ಮಾಡಿದ ಕುಮಾರಸ್ವಾಮಿ - Mahanayaka
12:44 PM Tuesday 27 - January 2026

ಬಿಜೆಪಿ ಗೋವುಗಳ ರಕ್ಷಣೆ ಮಾಡುತ್ತಿಲ್ಲ | ಗಂಭೀರ ಆರೋಪ ಮಾಡಿದ ಕುಮಾರಸ್ವಾಮಿ

h d kumaraswamy
05/06/2021

ಬೆಂಗಳೂರು: ‘ಗೋ‘ ರಕ್ಷಣೆ ಬಗ್ಗೆ ಬಿಜೆಪಿ ಹಾದಿಬೀದಿಯಲ್ಲಿ ಅರಚುತ್ತದೇ ಹೊರತು, ಗೋವುಗಳ ರಕ್ಷಣೆ ಮಾಡುವುದಿಲ್ಲ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಹಸುಗಳಲ್ಲಿ ಕಾಣಿಸಿಕೊಳ್ಳುವ ಗಂಭೀರ ಕಾಯಿಲೆಯಾದ ಕಾಲುಬಾಯಿ ಜ್ವರದ–FMD ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸಿಯೇ ಇಲ್ಲ. ರಾಜ್ಯ ಸರ್ಕಾರ ಕೇಳಿಲ್ಲ. ಈಗ ರಾಸುಗಳು ನರಳುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದಾರೆ.

ಚಿಕ್ಕಬಳ್ಳಾಪುರ, ಬೆಂಗಳೂರು, ಬೆಂಗಳೂರು ಗ್ರಾ. ಮತ್ತು ರಾಮನಗರ ಜಿಲ್ಲೆಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿದೆ. ಹೈನೋದ್ಯಮವನ್ನು ಕಂಗೆಡಿಸುವ ಈ ಕಾಯಿಲೆ ಸಾಂಕ್ರಾಮಿಕವಾಗುವುದನ್ನು ತಡೆಯಲು ಸರ್ಕಾರ ಕೂಡಲೇ ಕಾರ್ಯಪ್ರವೃತ್ತವಾಗಬೇಕು. ಮುಂದೆ ಜೂನ್‌ನಲ್ಲಿ ನಡೆಯಲಿರುವ ಲಸಿಕೆ ಅಭಿಯಾನವನ್ನು ಯಾವ ಕಾರಣಕ್ಕೂ ತಪ್ಪಿಸದಂತೆ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಾಯಿಲೆಗೆ ಬಲಿಯಾಗಿರುವ ರಾಸುಗಳ ಮಾಲೀಕರಿಗೆ ಸರ್ಕಾರ ಪರಿಹಾರ ನೀಡಲಿ. ಹಿಂದೆ ಬಿಜೆಪಿಯೇ ಅಧಿಕಾರದಲ್ಲಿದ್ದಾಗಲೂ ಕಾಲುಬಾಯಿ ಜ್ವರಬಂದಿತ್ತು. ಆಗ ನಾನೇ ವೈಯಕ್ತಿಕವಾಗಿ ರೈತರಿಗೆ ಪರಿಹಾರ ಹಣ ನೀಡಿದ್ದೆ. ಅದರಿಂದ ಎಚ್ಚೆತ್ತ ಸರ್ಕಾರ ತಾನೂ ಪರಿಹಾರ ನೀಡಿತ್ತು. ಗೋವುಗಳ ಬಗ್ಗೆ ದೊಡ್ಡದಾಗಿ ಮಾತಾಡುವ ಬಿಜೆಪಿ ಈಗ ಗೋವುಗಳ ರಕ್ಷಣೆ ಮಾಡಲಿ ಎಂದು ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚಿನ ಸುದ್ದಿ