ಬಿಜೆಪಿಯವರು ಸ್ವಯಂ ಘೋಷಿತ ದೇಶಪ್ರೇಮಿಗಳು: ಹಿಂದಿ ಹೇರಿಕೆ ವಿರುದ್ಧ ಕರವೇ ನಾರಾಯಣಗೌಡ ಆಕ್ರೋಶ - Mahanayaka

ಬಿಜೆಪಿಯವರು ಸ್ವಯಂ ಘೋಷಿತ ದೇಶಪ್ರೇಮಿಗಳು: ಹಿಂದಿ ಹೇರಿಕೆ ವಿರುದ್ಧ ಕರವೇ ನಾರಾಯಣಗೌಡ ಆಕ್ರೋಶ

narayana gowda karave
31/03/2026

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ಅವರು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶಪ್ರೇಮದ ಹೆಸರಿನಲ್ಲಿ ‘ಒಂದು ದೇಶ, ಒಂದು ಭಾಷೆ’ ಎಂಬ ಪರಿಕಲ್ಪನೆಯನ್ನು ಹೇರುತ್ತಿರುವ ಬಿಜೆಪಿ ನಾಯಕರ ನಿಲುವನ್ನು ಅವರು ಕಟುವಾಗಿ ಟೀಕಿಸಿದ್ದಾರೆ.

ಹಿಂದಿ ಭಾಷೆಯನ್ನು ಮುಂದಿಟ್ಟುಕೊಂಡು ಭಾರತವನ್ನು ಕಟ್ಟಲು ಹೊರಟಿರುವುದು ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ. ಪಾಕಿಸ್ತಾನದಿಂದ ಬಾಂಗ್ಲಾದೇಶ ಬೇರ್ಪಡಲು ಭಾಷಾ ಚಳುವಳಿಯೇ ಕಾರಣವಾಗಿತ್ತು ಎಂಬ ಇತಿಹಾಸವನ್ನು ಬಿಜೆಪಿ ನಾಯಕರು ನೆನಪಿಟ್ಟುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.

ಗೋಕಾಕ್ ಚಳುವಳಿಯ ಮೂಲಕ ರಾಜಕಾರಣಕ್ಕೆ ಬಂದವರು ಎಂದು ಹೇಳಿಕೊಳ್ಳುವ ಆರ್. ಅಶೋಕ್ ಅವರಿಗೆ ಕನ್ನಡದ ಬಗ್ಗೆ ನಿಜವಾದ ಕಾಳಜಿ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ರೈಲ್ವೆ ಇಲಾಖೆಯ ಡಿ–ಗ್ರೂಪ್ ನೌಕರರ ಬಡ್ತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್‌ ನಲ್ಲಿ ನಡೆಸಿದ್ದರಿಂದ ಕನ್ನಡದ ಮಕ್ಕಳಿಗೆ ಅನ್ಯಾಯವಾಗುತ್ತಿದ್ದರೂ ವಿರೋಧ ಪಕ್ಷದ ನಾಯಕರು ಏಕೆ ಮೌನವಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೇವಲ ಹಿಂದಿ ಭಾಷೆಯ ಕಾರಣದಿಂದಾಗಿ ಎಷ್ಟು ಕನ್ನಡದ ಮಕ್ಕಳು ಅನುತ್ತೀರ್ಣರಾಗುತ್ತಿದ್ದಾರೆ ಎಂಬ ಅಂಕಿ–ಅಂಶಗಳ ಬಗ್ಗೆ ಅಶೋಕ್ ಅವರು ಸದನದಲ್ಲಿ ಎಂದಾದರೂ ಮಾತನಾಡಿದ್ದಾರೆಯೇ ಎಂದು ನಾರಾಯಣಗೌಡರು ಪ್ರಶ್ನಿಸಿದ್ದಾರೆ.

ಬಿಜೆಪಿಯವರು ತಮ್ಮನ್ನು ತಾವು ಸ್ವಯಂ ಘೋಷಿತ ದೇಶಪ್ರೇಮಿಗಳು ಎಂದು ಕರೆದುಕೊಳ್ಳುತ್ತಾರೆ. ಆದರೆ ಈ ದೇಶಕ್ಕಾಗಿ ಹೋರಾಡಿ ಜೈಲಿಗೆ ಹೋದ ಇತಿಹಾಸ ಇವರಿಗಿದೆಯೇ? ಎಂದು ಪ್ರಶ್ನಿಸಿರುವ ಅವರು, ಯಡಿಯೂರಪ್ಪನವರಿಗೆ ಇದ್ದ ಕನ್ನಡದ ಕಾಳಜಿ ಈಗಿನ ಬಿಜೆಪಿ ನಾಯಕರಿಗೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ