ದೇವಸ್ಥಾನದ ಹುಂಡಿ ಹಣದ ಮೇಲೆ ಬಿಜೆಪಿ ಶಾಸಕನ ಕಣ್ಣು
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಕೆಲವು ದಿನಗಳಲ್ಲಿ ಘೋಷಣೆಯಾಗುವ ಸಾಧ್ಯತೆ ಇದ್ದು, ಈ ಮಧ್ಯೆ ಜಾತಿರಾಜಕಾರಣದ ಓಲೈಕೆಗಾಗಿ ಶಾಸಕರೊಬ್ಬರು ದೇವರ ಹುಂಡಿ ಹಣದಲ್ಲಿ ಸಮುದಾಯ ನಿರ್ಮಾಣ ಹಾಗೂ ಶಾದಿ ಮಹಲ್ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿಗೆ ಪ್ರಸ್ತಾಪ ಸಲ್ಲಿಸಿದ್ದು ಸಿಎಂ ಕೂಡ ಪ್ರಸ್ತಾಪಕ್ಕೆ ಸಮ್ಮತಿ ಸೂಚಿಸಿರುವ ವಿಚಾರ ಬಹಿರಂಗವಾಗಿದೆ.
ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ ಈ ರೀತಿ ಪ್ರಸ್ತಾಪವನ್ನಿಟ್ಟಿದ್ದಾರೆ. ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ನಿಧಿಯಲ್ಲಿ ಸಾಕಷ್ಟು ಅನುದಾನವಿದ್ದು, ಈ ಹಣವನ್ನ ಬಳಸಿ ಶಾದಿ ಮಹಲ್ ಸಮುದಾಯ ಭವನ ಸೇರಿ ವಿವಿಧ ಕಾಮಗಾರಿಗಳನ್ನ ಕೈಗೊಳ್ಳಲು ಸಿಎಂ ಬಸವರಾಜ ಬೊಮ್ಮಾಯಿ ಬಳಿ ಪ್ರಸ್ತಾಪವಿಟ್ಟಿದ್ದಾರೆ. ಶಾಸಕ ಹರ್ಷವರ್ದನ್ ಪ್ರಸ್ತಾಪಕ್ಕೆ ಸಿಎಂ ಬೊಮ್ಮಾಯಿ ಕೂಡ ಸೈ ಎಂದು ಒಪ್ಪಿಗೆ ಸೂಚಿಸಿದ್ದಾರೆ.
ಮುಜರಾಯಿ ಇಲಾಖೆ ಕಾಯ್ದೆ ಪ್ರಕಾರ ಯಾವುದೇ ದೇವಸ್ಥಾನದ ಹುಂಡಿ ಹಣವನ್ನು ಆ ದೇಗುಲದ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಬೇಕು. ಪಕ್ಕದ ದೇವಸ್ಥಾನಕ್ಕೆ ಕೂಡ ಬಳಕೆ ಮಾಡಬೇಕಾದರೂ ಹಲವು ಕಾನೂನು ಕಟ್ಟಲೆಗಳಿವೆ. ಆದರೆ ಕ್ಷೇತ್ರಕ್ಕೆ ಕೋಟಿ ಕೋಟಿ ರೂಪಾಯಿ ಅನುದಾನ ಬಂದರೂ ಸಹ ಆ ಅನುದಾನ ಬಳಸುವ ಬದಲು ಶ್ರೀಕಂಠೇಶ್ವರ ದೇವಸ್ಥಾನದ ಹುಂಡಿ ದುಡ್ಡಿನ ಮೇಲೆ ಶಾಸಕರು ಕಣ್ಣು ಹಾಕಿದ್ದು ಆ ಹಣದಲ್ಲಿ ನಂಜನಗೂಡಿನಲ್ಲಿ ಮಾಡಬೇಕಾದ ಹಲವು ಕಾಮಗಾರಿಗಳನ್ನ ಸಿಎಂ ಮುಂದೆ ಪ್ರಸ್ತಾಪ ಇಟ್ಟಿದ್ದಾರೆ.
ಶಾದಿ ಮಹಲ್ ನಿರ್ಮಾಣಕ್ಕೆ 1 ಕೋಟಿ 50 ಲಕ್ಷ ರೂ, ಬಾಬು ಜಗಜೀವನ್ ರಾಮ್ ಸಮುದಾಯ ಭವನ -1 ಕೋಟಿ ರೂ, ಸವಿತಾ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 80 ಲಕ್ಷರೂ. ಮಡಿವಾಳ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ, ಈಡಿಗ ಸಮುದಾಯ ಭವನ ನಿರ್ಮಾಣಕ್ಕೆ 70 ಲಕ್ಷ ರೂ. ಉಪ್ಪಾರ ಸಮುದಾಯ ನಿರ್ಮಾಣಕ್ಕೆ 2 ಕೋಟಿ ರೂ. ಪೌರಕಾರ್ಮಿಕರ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ ರೂ. ವಾಲ್ಮೀಕಿ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ 30 ಲಕ್ಷ, ಕುಂಬಾರ ಸಮುದಾಯ ಭವನ ನಿರ್ಮಾಣಕ್ಕೆ 30 ಲಕ್ಷ ರೂ. ಒಕ್ಕಲಿಗ, ಗೆಜ್ಜೆಗಾರ ಸಮುದಾಯ , ಗಾಣಿಗರ ಭವನ ನಿರ್ಮಾಣಕ್ಕೆ ತಲಾ ಮೂವತ್ತು ಲಕ್ಷ ರೂ. ಬಳಸಲು ಪ್ರಸ್ತಾಪ ಸಲ್ಲಿಸಿದ್ದಾರೆ.
ದೇವರ ಹುಂಡಿ ದುಡ್ಡಲ್ಲಿ ಕಾಮಗಾರಿಗೆ ಸಲ್ಲಿಸಿರುವ ಪ್ರಸ್ತಾಪ ನೇರವಾಗಿ ಸಿಎಂ ಬೊಮ್ಮಾಯಿ ಬಳಿಯೇ ಹೋಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರು ಶಾದಿ ಮಹಲ್ ಬಿಟ್ಟು ಉಳಿದ ಎಲ್ಲಾ ಕಾಮಗಾರಿಗಳಿಗೂ ಶ್ರೀಕಂಠೇಶ್ವರ ದೇವಸ್ಥಾನದ ಹುಂಡಿ ಹಣವನ್ನ ಬಳಸಲು ಒಪ್ಪಿಗೆ ಸೂಚಿಸಿದ್ದಾರೆ.
ಮುಜರಾಯಿ ಕಾನೂನು ಉಲ್ಲಂಘಿಸಿ ತರಾತುರಿಯಲ್ಲಿ ಸಿಎಂ ಬೊಮ್ಮಾಯಿ ಅನುಮತಿ ನೀಡಿದ್ದು ಹೇಗೆ ಕಾಣಿಕೆಯಾಗಿ ಭಕ್ತರು ನೀಡುವ ದುಡ್ಡನ್ನು ಹೀಗೆ ದುರ್ಬಳಕೆ ಮಾಡಿಕೊಳ್ಳುವುದು ತಪ್ಪಲ್ಲವೇ ಎಂಬುದು ಜನರ ಪ್ರಶ್ನೆಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























