ಮಂಡ್ಯದಲ್ಲಿ ಸುಮಲತಾಗೆ ಬಿಜೆಪಿಗರ ಬೆಂಬಲ: ಮೈತ್ರಿ ಬಿಸಿ ಆರುವ ಮುನ್ನವೇ ಕುಮಾರಸ್ವಾಮಿಗೆ ಶಾಕ್!

ಮಂಡ್ಯ: ಲೋಕಸಭಾ ಸಮರ ಆರಂಭವಾಗಿದೆ. ಇದೇ ಸಮಯದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ರಾಜಕೀಯ ಚಟುವಟಿಕೆಗಳು ಕಾವೇರುತ್ತಿದ್ದು, ಈ ಬಾರಿ ಹೇಗಾದರೂ ಮಂಡ್ಯ ಗೆಲ್ಲಲೇ ಬೇಕು ಅಂತ ದಳಪತಿಗಳು ಕನಸು ಕಾಣುತ್ತಿದ್ದರೆ, ಇತ್ತ ದೋಸ್ತಿ ಪಕ್ಷ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಸುಮಲತಾ ಅವರಿಗೆ ಪರೋಕ್ಷ ಬೆಂಬಲ ನೀಡಿದ್ದಾರೆನ್ನಲಾಗಿದೆ.
ಬಿಜೆಪಿ – ಜೆಡಿಎಸ್ ದೋಸ್ತಿಯಾದ ಬೆನ್ನಲ್ಲೇ ಮಂಡ್ಯ ಕ್ಷೇತ್ರ ಕಗ್ಗಂಟಾಗಿ ಪರಿಣಮಿಸಿದೆ. ಮಂಡ್ಯದಲ್ಲಿ ಬಿಜೆಪಿಗೆ ಸುಮಲತಾ ಅವರು ಬೆಂಬಲಿಸಿದ್ದರು. ಮಂಡ್ಯದಿಂದ ಸ್ಪರ್ಧಿಸಿದ ಬಿಜೆಪಿಯ 7 ಜನರಿಗೂ ಸುಮಲತಾ ಬೆಂಬಲ ನೀಡಿದ್ದರು. ಹೀಗಾಗಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಬಾರದು ಎಂದು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.
ಇನ್ನೊಂದೆಡೆಯಲ್ಲಿ ಈ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರುವ ಮಾಜಿ ಸಚಿವ ನಾರಾಯಣ ಗೌಡ, ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮಂಡ್ಯದಲ್ಲಿ ಬಿಜೆಪಿಯಿಂದ 7 ಜನ ಸ್ಪರ್ಧಿಸಿದ್ದಾಗ ಬಿಜೆಪಿಗೆ ಸುಮಲತಾ ಅಂಬರೀಶ್ ಸಪೋರ್ಟ್ ಮಾಡಿದ್ದರು. ಈಗ ಮಂಡ್ಯವನ್ನು ಯಾಕೆ ಜೆಡಿಎಸ್ ಗೆ ಬಿಟ್ಟು ಕೊಡಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಈಗಷ್ಟೇ ಚಿಗುರುತ್ತಿದೆ. ನಾನು ಇದೇ ಜಿಲ್ಲೆಯಲ್ಲಿ ಗೆದ್ದು ಬಿಜೆಪಿ ಶಾಸಕನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
ಈ ಬಾರಿ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಪಣತೊಟ್ಟಿರುವ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಗೆ ಟಿಕೆಟ್ ಬೇಡಿಕೆ ಇಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಕಳೆದ ಬಾರಿ ಸುಮಲತಾ ವಿರುದ್ಧ ಸೋತಿರುವ ನಿಖಿಲ್ ಗೆ ಈ ಬಾರಿ ಅನುಕಂಪದ ಮತಗಳು ಬರಬಹುದು ಎನ್ನುವುದು ಜೆಡಿಎಸ್ ಲೆಕ್ಕಾಚಾರವಾಗಿದೆ. ಈ ನಡುವೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸುಮಲತಾ ಅಂಬರೀಶ್ ಅವರಿಗೆ ಬೆಂಬಲವಾಗಿ ನಿಂತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.