ಧಮ್, ತಾಕತ್ ಪ್ರಶ್ನೆ ಮಾಡುವ ಬೊಮ್ಮಾಯಿ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲಿ: ಸಿದ್ದರಾಮಯ್ಯ ಆಹ್ವಾನ

ಬಾಗಲಕೋಟೆಯಲ್ಲಿ ಇಂದು ನಡೆದ ಕಾಂಗ್ರೆಸ್ ಪಕ್ಷದ “ಪ್ರಜಾಧ್ವನಿ” ಸಮಾವೇಶದಲ್ಲಿ ಪಾಲ್ಗೊಂಡ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಚುನಾವಣಾಪೂರ್ವದಲ್ಲಿ ಜನರಿಗೆ 600 ಭರವಸೆಗಳನ್ನು ನೀಡಿ ಅದರಲ್ಲಿ 10% ಭರವಸೆಯನ್ನೂ ಈಡೇರಿಸದ ರಾಜ್ಯ ಬಿಜೆಪಿಯ ವಚನಭ್ರಷ್ಟ ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡಿದರು.
2018ರಲ್ಲಿ ನಮ್ಮ ಸರ್ಕಾರದ ಕಡೇ ಬಜೆಟ್ ಅನ್ನು ಮಂಡಿಸಿದ್ದೆ, ಅದರಲ್ಲಿ ನಾವು ಅಧಿಕಾರಕ್ಕೆ ಬರುವ ಪೂರ್ವದಲ್ಲಿ ನೀಡಿದ್ದ ಭರವಸೆಗಳು ಹಾಗೂ ಅಧಿಕಾರಕ್ಕೆ ಬಂದ ನಂತರ ಈಡೇರಿಸಿದ ಭರವಸೆಗಳು ಯಾವುವು ಹಾಗೂ ಮುಂದೆ ಏನು ಮಾಡುತ್ತೇವೆ ಎಂಬುದನ್ನು ಹೇಳಿದ್ದೆ. 2013ರ ಚುನಾವಣೆಯಲ್ಲಿ ರಾಜ್ಯದ ಜನರಿಗೆ 165 ಭರವಸೆಗಳನ್ನು ನೀಡಿದ್ದೆ, ಅವುಗಳಲ್ಲಿ 158 ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಆದರೆ ರಾಜ್ಯ ಬಿಜೆಪಿ ಅವರು 2018ರಲ್ಲಿ ಜನರಿಗೆ 600 ಭರವಸೆಗಳನ್ನು ನೀಡಿದ್ದರು. ಇದರಲ್ಲಿ 50 ರಿಂದ 60 ಭರವಸೆಗಳನ್ನು ಕೂಡ ಈಡೇರಿಸಲು ಅವರಿಂದ ಸಾಧ್ಯವಾಗಿಲ್ಲ. ಈಗ ಮತ್ತೆ ಚುನಾವಣೆ ಹತ್ತಿರ ಬಂದಿರುವುದರಿಂದ ಬೊಮ್ಮಾಯಿ ಅವರು ಫೆಬ್ರವರಿ 17ಕ್ಕೆ ಬಜೆಟ್ ಮಂಡಿಸುವ ಘೋಷಣೆ ಮಾಡಿದ್ದಾರೆ, ಇದರಲ್ಲಿ ಏನೆಲ್ಲ ಘೋಷಣೆ ಮಾಡಲು ಸಾಧ್ಯ ಅವೆಲ್ಲವನ್ನು ಘೋಷಿಸಿ, ಒಂದನ್ನೂ ಈಡೇರಿಸಲ್ಲ. ಇಂಥಾ ಭರವಸೆಗಳನ್ನು ನೀವು ನಂಬಬೇಡಿ ಎಂದರು.
ಬಿಜೆಪಿಯವರು 2018ರಲ್ಲಿ ಮಹಿಳೆಯರಿಗೆ 21 ಭರವಸೆಗಳನ್ನು ನೀಡಿ, ಅವರನ್ನು ಉದ್ಧಾರ ಮಾಡುವುದಾಗಿ ಹೇಳಿದ್ದರು, ಈಗ ಬಿಜೆಪಿ ಆಡಳಿತದ ಮೂರೂವರೆ ವರ್ಷಗಳಲ್ಲಿ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ. ಈ ವಿಚಾರವನ್ನು ಅವರು ತಮ್ಮ ಪ್ರಣಾಳಿಕೆಯೊಂದಿಗೆ ಬರಲಿ, ನಾನು ನಮ್ಮ ಪ್ರಣಾಳಿಕೆಯೊಂದಿಗೆ ಬರುತ್ತೇನೆ, ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ. ಬೇರೆಯವರಿಗೆ ಧಮ್, ತಾಕತ್ ಪ್ರಶ್ನೆ ಮಾಡುವ ಬೊಮ್ಮಾಯಿ ಅವರು ಒಂದೇ ವೇದಿಕೆ ಮೇಲೆ ಚರ್ಚೆಗೆ ಬರಲಿ ಎಂದು ಆಹ್ವಾನಿಸಿದರು.
ಮೊನ್ನೆ 16ರಂದು ಕಾಂಗ್ರೆಸ್ ಪಕ್ಷ “ನಾ ನಾಯಕಿ” ಸಮಾವೇಶವನ್ನು ಏರ್ಪಾಡು ಮಾಡಿತ್ತು, ಇದಕ್ಕೆ ಪ್ರಿಯಾಂಕ ಗಾಂಧಿ ಅವರು ಆಗಮಿಸಿದ್ದರು. ನಾವು ಪ್ರತೀ ಕುಟುಂಬದ ಯಜಮಾನಿಗೆ 2000 ರೂ. ನೀಡುತ್ತೇವೆ ಎಂಬ ಭರವಸೆ ನೀಡಿದ ಮೇಲೆ ಬಿಜೆಪಿಯವರು ಜಾಹೀರಾತು ನೀಡಿ, ಮಹಿಳೆಯರಿಗೆ ಅದನ್ನು ಮಾಡುತ್ತೇವೆ, ಇದನ್ನು ಮಾಡುತ್ತೇವೆ ಎಂದು ಪುಂಕಾನುಪುಂಕವಾಗಿ ಸುಳ್ಳು ಆಶ್ವಾಸನೆ ನೀಡಿದ್ದಾರೆ. ಅಧಿಕಾರಕ್ಕೆ ಬಂದು ಮೂರುವರೆ ವರ್ಷವಾಯಿತಲ್ಲ ಬೊಮ್ಮಾಯಿ ಅವರು ಯಾಕೆ ಇಷ್ಟು ದಿನ ಮಹಿಳೆಯರಿಗಾಗಿ ಒಂದು ಯೋಜನೆಯನ್ನು ಜಾರಿ ಮಾಡಿಲ್ಲ? ನಿಮ್ಮ ಕೈಹಿಡಿದುಕೊಂಡವರು ಯಾರು ಬೊಮ್ಮಾಯಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ನಾವು ಕೊಟ್ಟ ಮಾತಿನಂತೆ ನಡೆದುಕೊಂಡರೆ, ಬಿಜೆಪಿ ವಚನ ಭ್ರಷ್ಟರು. ರಾಜ್ಯದ ಪ್ರತೀ ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂ. ನಂತೆ ವರ್ಷಕ್ಕೆ 24,000 ರೂ. ನೀಡುವ ಭರವಸೆಗೆ ನಾನು, ಡಿ.ಕೆ ಶಿವಕುಮಾರ್ ಸಹಿ ಮಾಡಿದ್ದೇವೆ. ಇದನ್ನು ಅಕ್ಷರಶಃ ಜಾರಿಗೆ ತಂದೇ ತರುತ್ತೇವೆ. ಪ್ರತೀ ಮನೆಗೆ ಬಂದು ಮನೆಯ ಯಜಮಾನಿಯನ್ನು ಗುರುತಿಸಿ ಅವರಿಗೆ 2000 ರೂ. ತಿಂಗಳಿಗೆ ನೀಡುವ ಕೆಲಸ ಮಾಡುತ್ತೇವೆ. ಈ ಹಿಂದೆ ಗರ್ಭೀಣಿ ಮತ್ತು ಬಾಣಂತಿಯರಿಗೆ ಮಾತೃಪೂರ್ಣ ಯೋಜನೆ ಅಡಿ ಪೌಷ್ಟಿಕಾಂಶಯುಕ್ತ ಬಿಸಿಯೂಟ ನೀಡುತ್ತೇವೆ ಎಂದು ಹೇಳಿ, ಅದನ್ನು ಜಾರಿ ಮಾಡಿದ್ದೆವು. ಈಗ ಅದು ಬಂದ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಎಲ್ಲಾ ಮನೆಗಳಿಗೆ 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವ ಘೋಷಣೆ ಮಾಡಿದ್ದೇವೆ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ತೇವೆ. ಇದೇ ಬಿಜೆಪಿ ಪಕ್ಷ ಕೃಷ್ಣಾ ಮೇಲ್ದಂಡೆಯ 3ನೇ ಹಂತದ ಕೆಲಸವನ್ನು ಪೂರ್ಣಗೊಳಿಸುತ್ತೇವೆ ಮತ್ತು 5 ವರ್ಷಗಳಲ್ಲಿ ಒಂದೂವರೆ ಲಕ್ಷ ಕೋಟಿ ರೂಪಾಯಿಯನ್ನು ನೀರಾವರಿಗೆ ಖರ್ಚು ಮಾಡುವುದಾಗಿ ಹೇಳಿತ್ತು. ಕಳೆದ ಮೂರುವರೆ ವರ್ಷಗಳಲ್ಲಿ 45,000 ಕೋಟಿ ರೂ. ಮಾತ್ರ ಖರ್ಚು ಮಾಡಿದ್ದಾರೆ. ಇದೇ ಕಾರಣಕ್ಕೆ ನಾವು ಬಿಜಾಪುರದಲ್ಲಿ ಸಮಾವೇಶ ಮಾಡಿ, ನಾವು ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 2 ಲಕ್ಷ ಕೋಟಿ ರೂ. ಖರ್ಚು ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆ. ಬಿಜಾಪುರದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ, ಪುನರ್ವಸತಿ ಕಲ್ಪಿಸಿ ಕೊಟ್ಟಿಲ್ಲ. ನಾವು ಅಧಿಕಾರಕ್ಕೆ ಬಂದರೆ ಎಲ್ಲ ಸಂತ್ರಸ್ತರಿಗೆ ಪರಿಹಾರ ನೀಡಿ, ಪುನರ್ವಸತಿ ಕಾರ್ಯ ಮಾಡುತ್ತೇವೆ. ತುಂಗಭದ್ರಾ ಅಣೆಕಟ್ಟಿನಲ್ಲಿ 37 ಟಿಎಂಸಿ ನೀರು ಶೇಖರಣೆಯಾಗುವಷ್ಟು ಹೂಳು ತುಂಬಿದೆ, ನಮ್ಮ ಪಾಲಿನ 200 ಟಿಎಂಸಿ ನೀರು ಆಂದ್ರಪ್ರದೇಶಕ್ಕೆ ಹೋಗುತ್ತಿದೆ. ಇದನ್ನು ಸರಿಪಡಿಸಲು ತುಂಗಭದ್ರಾ ಅಣೆಕಟ್ಟಿಗೆ ಸಮನಾಂತರವಾಗಿ ಇನ್ನೊಂದು ಅಣೆಕಟ್ಟು ನಿರ್ಮಾಣ ಮಾಡುತ್ತೇವೆ. ಹೀಗೆ ಕೃಷ್ಣ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ, ಮೇಕೆದಾಟು ಎಲ್ಲಾ ನೀರಾವರಿಗೆ ಯೋಜನೆಗಳನ್ನು 2 ಲಕ್ಷ ಕೋಟಿ ಹಣದಲ್ಲಿ ಪೂರ್ಣಗೊಳಿಸುತ್ತೇವೆ. 2012ರಲ್ಲಿ ನಾವು ಹೊಸಪೇಟೆಯಿಂದ ಕೂಡಲಸಂಗಮದ ವರೆಗೆ ಪಾದಯಾತ್ರೆ ಮಾಡಿ, ನಾವು ಅಧಿಕಾರಕ್ಕೆ ಬಂದರೆ ನೀರಾವರಿಗೆ 50,000 ಕೋಟಿ ರೂ. ಖರ್ಚು ಮಾಡುತ್ತೇವೆ ಎಂದು ಹೇಳಿದ್ದೆವು. ಅಧಿಕಾರಕ್ಕೆ ಬಂದ ನಂತರ 50,000 ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಿದ್ದೇವೆ ಎಂದರು.
ನರೇಂದ್ರ ಮೋದಿ ಅವರು 2016ರಲ್ಲಿ ಈ ದೇಶದ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆ ನೀಡಿದ್ದರು. 2023 ಬಂದಿದೆ, ಈಗಲಾದರೂ ರೈತರ ಆದಾಯ ದುಪ್ಪಟ್ಟಾಗಿದೆಯಾ? ಇದರ ಬದಲು ರೈತರು ಕೃಷಿಗೆ ಹಾಕುವ ಬಂಡವಾಳದ ಹಣ ದುಪ್ಪಟ್ಟಾಗಿದೆ. ರಸಗೊಬ್ಬರ, ಕಳೆನಾಶಕ, ಕೀಟನಾಶಕ, ಕೃಷಿ ಯಂತ್ರೋಪಕರಣಗಳ ಬೆಲೆ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಮಾತನ್ನು ಕೇಳಿ ಎಪಿಎಂಸಿ ಮಸೂದೆಗೆ ತಿದ್ದುಪಡಿ ಮಸೂದೆ ಜಾರಿ ಮಾಡಲಾಯಿತು. ಕೇಂದ್ರ ಸರ್ಕಾರ ಇದನ್ನು ವಾಪಾಸು ಪಡೆದರೂ ಕೂಡ ರಾಜ್ಯ ಸರ್ಕಾರ ಇನ್ನೂ ವಾಪಸು ಪಡೆದಿಲ್ಲ. ನಾವು ಅಧಿಕಾರಕ್ಕೆ ಬಂದ ತಕ್ಷಣ ಈ ತಿದ್ದುಪಡಿ ಮಸೂದೆಯನ್ನು ವಾಪಾಸು ಪಡೆದು ಹಿಂದಿನ ಪದ್ಧತಿಯನ್ನು ಮುಂದುವರೆಸುತ್ತೇವೆ ಎಂದರು.
2014ರಲ್ಲಿ ಕಬ್ಬಿನ ಬೆಲೆ ಬಿದ್ದುಹೋಗಿತ್ತು. ಒಂದು ಟನ್ ಗೆ 350 ರೂ. ಅಂತೆ 1800 ಕೋಟಿ ಹಣವನ್ನು ಸರ್ಕಾರದ ಖಜಾನೆಯಿಂದ ನಾವು ನೀಡಿದ್ದೆವು. ಈಗಲೂ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ನರೇಂದ್ರ ಮೋದಿ ಅಥವಾ ಬೊಮ್ಮಾಯಿ ಒಂದು ರೂಪಾಯಿ ಆದ್ರೂ ಕೊಟ್ಟಿದ್ದಾರ? ಇದೇನಾ ರೈತರ ಆದಾಯ ದುಪ್ಪಟ್ಟು ಮಾಡುವ ರೀತಿ? ನಾನು 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆ, ಈಗ 5 ಕೆ.ಜಿ ಮಾಡಿದ್ದಾರೆ. ನಾವು ಮತ್ತೆ ಅಧಿಕಾರಕ್ಕೆ ಬಂದರೆ 10 ಕೆ.ಜಿ ಉಚಿತವಾಗಿ ಅಕ್ಕಿಯನ್ನು ನೀಡುತ್ತೇವೆ ಎಂದು ಅವರು ಘೋಷಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw