ಅನುಕಂಪದ ನೌಕರಿ ಕೊಡಿಸಲು ಲಂಚಕ್ಕೆ ಬೇಡಿಕೆ: ಲಂಚಬಾಕ ಬಿಇಓ ಲೋಕಾಯುಕ್ತ ಬಲೆಗೆ

ಚಿಕ್ಕಮಗಳೂರು: ಅನುಕಂಪದ ನೌಕರಿಗೆ ಶಿಫಾರಸ್ಸು ಮಾಡಲು ಲಂಚಕ್ಕೆ ಬೇಡಿಕೆಯಿಟ್ಟ ಮೂಡಿಗೆರೆ ಬಿಇಓ ಹೇಮಂತ್ ರಾಜ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಅನುಕಂಪದ ನೌಕರಿಗೆ ಶಿಫಾರಸ್ಸು ಮಾಡಲು ಬಿಇಓ ಹೇಮಂತ್ ರಾಜ್ 15 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಬಳಿಕ 10 ಸಾವಿರ ಹಣಕ್ಕೆ ಒಪ್ಪಿಕೊಂಡಿದ್ದ. 15000 ಕೊಟ್ರೆ ಕೆಲಸ ಎಂದು ಎಸ್.ಡಿ.ಎ. ಬಷೀರ್ ಅಹಮದ್ ನೊಂದ ಮಹಿಳೆಗೆ ಹೇಳಿದ್ದು, ಮನವಿ ಮಾಡಿಕೊಂಡ ನಂತರ 10 ಸಾವಿರ ಹಣಕ್ಕೆ ಬಿಇಓ ಒಪ್ಪಿಕೊಂಡಿದ್ದಾನೆ.
ಈ ಬಗ್ಗೆ ಚಿಕ್ಕಮಗಳೂರು ನಗರದ ನೊಂದ ಮಹಿಳೆ ಲೋಕಾಯುಕ್ತರ ಮೊರೆ ಹೋಗಿದ್ದರು. ಮಹಿಳೆಯ ಜೊತೆಗೆ ಮಾಡಿಕೊಂಡ ಒಪ್ಪಂದಂತೆ 10 ಸಾವಿರ ರೂಪಾಯಿಯನ್ನು ಲಂಚವಾಗಿ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಇನ್ಸ್ ಪೆಕ್ಟರ್ ಅನಿಲ್ ರಾಥೋಡ್ ತಂಡ ದಾಳಿ ನಡೆಸಿದೆ.
ರಾಜ್ಯದಲ್ಲಿ ಒಂದರ ಹಿಂದೊಂದರಂತೆ ಲೋಕಾಯುಕ್ತ ದಾಳಿಗಳು ನಡೆಯುತ್ತಿದೆ. ದಿನಕ್ಕೊಬ್ಬರಂತೆ ಅಧಿಕಾರಿಗಳು ಲಂಚ ಪಡೆದು ಸಿಕ್ಕಿ ಬೀಳುತ್ತಿದ್ದಾರೆ. ಆದರೂ ಕೂಡ, ಮತ್ತೆ ಮತ್ತೆ ಪ್ರಕರಣಗಳು ಪತ್ತೆಯಾಗುತ್ತಲೇ ಇದೆ.
ಸರ್ಕಾರದ ಎಲ್ಲ ಸವಲತ್ತುಗಳನ್ನು ಪಡೆಯುವ ಅಧಿಕಾರಿಗಳು ಅದೂ ಸಾಕಾಗುವುದಿಲ್ಲ ಎಂದು ಒಂದು ಹೊತ್ತಿನ ಊಟಕ್ಕೆ ದುಡಿಯುವ ಜನರ ಕೈಯಿಂದಲೂ ಕಿತ್ತುಕೊಂಡು ತಿನ್ನುತ್ತಿದ್ದಾರೆ. ಇಂತಹವರನ್ನು ಸೇವೆಯಿಂದಲೇ ವಜಾಗೊಳಿಸಬೇಕು, ಲಂಚ ಪಡೆಯುವ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಮತ್ತೆ ಸೇವೆಯಲ್ಲಿ ಮುಂದುವರಿಸಬಾರದು ಎನ್ನುವ ಆಕ್ರೋಶದ ಮಾತುಗಳು ನಿರಂತರವಾಗಿ ಕೇಳಿ ಬರುತ್ತಿವೆ.