ಪ್ರೀತಂ ಗೌಡ ಅವರೇ ಬುದ್ಧಿವಂತಿಕೆ ಮಾತು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಮಾಡಿ: ಜೆಡಿಎಸ್ ಮುಖಂಡ ಪ್ರವೀಣ್ ಕುಮಾರ್ ತಿರುಗೇಟು - Mahanayaka
10:15 AM Wednesday 20 - August 2025

ಪ್ರೀತಂ ಗೌಡ ಅವರೇ ಬುದ್ಧಿವಂತಿಕೆ ಮಾತು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಮಾಡಿ: ಜೆಡಿಎಸ್ ಮುಖಂಡ ಪ್ರವೀಣ್ ಕುಮಾರ್ ತಿರುಗೇಟು

praveen kumar
23/07/2022


Provided by

ಹಾಸನ: ಶಾಸಕ ಪ್ರೀತಂ ಗೌಡರು ಬುದ್ಧಿವಂತಿಕೆಯ ಮಾತು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಮಾಡಿ ತೋರಿಸಿ ಎಂದು ಜೆಡಿಎಸ್ ಮುಖಂಡ ಪ್ರವೀಣ್ ಕುಮಾರ್ ಹೇಳಿದರು.

ಇತ್ತೀಚೆಗೆ ಶಾಸಕ ಪ್ರೀತಂ ಗೌಡ ಅವರು  ಮಾಧ್ಯಮಗಳಿಗೆ  ಹೇಳಿಕೆ ನೀಡುತ್ತಾ, ಒಕ್ಕಲಿಗ ನಾಯಕರಲ್ಲಿ ಪಬ್ಲಿಕ್ ಲಿಮಿಟೆಡ್ ಒಕ್ಕಲಿಗ ಹಾಗೂ ಪ್ರೈವೇಟ್ ಲಿಮಿಟೆಡ್  ಅಂತ ಇರುತ್ತಾರೆ. ನಾನು ನಾಯಕ ಅಂತ ಹೇಳಿಕೊಳ್ಳುತ್ತಿರುವವರೆಲ್ಲ ಪ್ರೈವೆಟ್ ಲಿಮಿಟೆಡ್ ಒಕ್ಕಲಿಗರು. ನಾನು ಹಾಗೂ ಬಿಜೆಪಿಯಲ್ಲಿರುವ ಒಕ್ಕಲಿಗರು ಪಬ್ಲಿಕ್ ಲಿಮಿಟೆಡ್ ನ ಒಕ್ಕಲಿಗರು. ಪಬ್ಲಿಕ್ ಲಿಮಿಟೆಡ್ ನ ಒಕ್ಕಲಿಗರು ಕೆರೆ ಬದಿ ಅಥವಾ ರಸ್ತೆ ಬದಿಯಲ್ಲಿರುವ ಮರದಂತೆ. ಅದಕ್ಕೆ ನೀರು ಗೊಬ್ಬರ ಹಾಕಿದರೆ ಫಲ ಎಲ್ಲರೂ ತಿನ್ನಬಹುದು.  ಪಬ್ಲಿಕ್ ಲಿಮಿಟೆಡ್ ಒಕ್ಕಲಿಗರು ಎಂದರೆ ಕಾಂಪೌಂಡ್ ಒಳಗೆ ಇರುವ  ಮರದಂತೆ ಅದರ ಫಲವನ್ನು ಮನೆಯವರು ಬಿಟ್ಟು ಬೇರೆಯವರು ಸವಿಯಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು ಈ ಹೇಳಿಕೆಗೆ  ಪ್ರವೀಣ್ ಕುಮಾರ್ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಅಭಿವೃದ್ಧಿ ಕೆಲಸ ಮಾಡುವಾಗ ಮೊದಲು ರಸ್ತೆ ಬದಿಯಲ್ಲಿರುವ ಮರಗಳೇ ಹೋಗೋದು. ಈಗಾಗಲೇ ಶಾಸಕರು ಕ್ಷೇತ್ರದಲ್ಲಿ ನಡೆಸಿದ ಕಳಪೆ ಕಾಮಗಾರಿಗಳ ಸುದ್ದಿಗಳು ಮಾಧ್ಯಮಗಳಲ್ಲಿ ರಾರಾಜಿಸುತ್ತಿವೆ.  ನಿಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬುದ್ಧಿವಂತಿಕೆಯ ಮಾತುಗಳನ್ನಾಡದೇ, ಅಭಿವೃದ್ಧಿ ಕೆಲಸಗಳನ್ನು ಮಾಡಿ ಎಂದು ಪ್ರವೀಣ್ ಕುಮಾರ್ ತಿರುಗೇಟು ನೀಡಿದರು.

ಬಿಜೆಪಿಯಲ್ಲಿರುವ ಒಕ್ಕಲಿಗರು ಮಾತ್ರ ನಾಯಕರು ಎಂದು ಬಿಂಬಿಸುವ, ಜನರನ್ನು ದಾರಿ ತಪ್ಪಿಸುವ ನಿಮ್ಮ ಪ್ರಯತ್ನ ನಿಮ್ಮ ರಾಜಕೀಯ ಅಪ್ರಬುದ್ಧತೆಯನ್ನು ತೋರಿಸುತ್ತದೆ.  ನಿಮ್ಮ ಪಕ್ಷವೇ ಪಬ್ಲಿಕ್ ಲಿಮಿಟೆಡ್ ಗಳನ್ನು ಪ್ರೈವೆಟ್ ಲಿಮಿಟೆಡ್ ಮಾಡುತ್ತಿದೆ. ಅದರ ಬಗ್ಗೆಯೂ ಸ್ವಲ್ಪ ಜನರಿಗೆ ವಿವರಿಸುವಿರಾ? ಎಂದು ಪ್ರವೀಣ್ ಕುಮಾರ್ ಸವಾಲು ಹಾಕಿದರು.

ಒಕ್ಕಲಿಗ ಸಮುದಾಯದ ಎಲ್ಲ ನಾಯಕರು ಎಲ್ಲ ಪಕ್ಷಗಳಲ್ಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ದೇಶವೇ ಮೆಚ್ಚುವ ಸಾಧನೆ ಮಾಡಿದ್ದಾರೆ. ಅಂತಹ ಎಲ್ಲ ನಾಯಕರನ್ನು ಗೌರವಿಸುವ ಸಂಸ್ಕೃತಿಯನ್ನು ಜೆಡಿಎಸ್ ಪಕ್ಷ ಕಾರ್ಯಕರ್ತರಿಗೆ ಹೇಳಿಕೊಟ್ಟಿದೆ. ನಿಮ್ಮ ಹೇಳಿಕೆಯ  ಫಲವನ್ನು ಮುಂದಿನ ಚುನಾವಣೆಯಲ್ಲಿ ಜನರೇ ನೀಡಲಿದ್ದಾರೆ ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ