ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು
ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಸಿದ್ಧಾಪುರ ಗ್ರಾಮದ ಬಳಿ ಮಂಗಳವಾರ ತಡರಾತ್ರಿ 1 ಗಂಟೆಯ ಸುಮಾರಿಗೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ಕಬ್ಬು ತುಂಬಿ ನಿಂತಿದ್ದ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಮೃತಪಟ್ಟವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಎಂದು ತಿಳಿದು ಬಂದಿದ್ದು, ಮೃತರನ್ನು ವಿಶ್ವನಾಥ್ (17), ಪ್ರವೀಣ್ (22), ಗಣೇಶ (20) ಹಾಗೂ ಪ್ರಜ್ವಲ್ (17) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸಿದ್ದಾಪುರ ಗ್ರಾಮದ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಿದ್ದಾಪುರ ಬಳಿರುವ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ನ್ನು ಬಿಜಾಪುರ-ಬೆಳಗಾವಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ರಸ್ತೆ ಬದಿ ಇದ್ದ ಟ್ರ್ಯಾಕ್ಸರ್ ಕಾರು ಚಾಲಕನಿಗೆ ಕಾಣದ ಕಾರಣ, ಕಾರು ವೇಗವಾಗಿ ಟ್ರ್ಯಾಕ್ಟರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಟ್ರ್ಯಾಕ್ಟರ್ ನೊಳಗೆ ಕಾರು ಸಿಲುಕಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯ ಮಾಹಿತಿ ತಿಳಿದು ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಘಟನೆ ಸಂಬಂಧ ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























