ಮಕ್ಕಳ ಜೀವದ ಜೊತೆ ಚೆಲ್ಲಾಟ: ಕುಡಿದು ಶಾಲಾ ವಾಹನ ಚಲಾಯಿಸಿದ 23 ಚಾಲಕರ ವಿರುದ್ಧ ಪ್ರಕರಣ - Mahanayaka

ಮಕ್ಕಳ ಜೀವದ ಜೊತೆ ಚೆಲ್ಲಾಟ: ಕುಡಿದು ಶಾಲಾ ವಾಹನ ಚಲಾಯಿಸಿದ 23 ಚಾಲಕರ ವಿರುದ್ಧ ಪ್ರಕರಣ

bus driver
10/07/2024

ಬೆಂಗಳೂರು:  ಶಾಲಾ ವಾಹನಗಳ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಒಟ್ಟು 23 ಚಾಲಕರ ವಿರುದ್ಧ ಮದ್ಯ ಸೇವಿಸಿ ವಾಹನ ಚಲಾಯಿಸಿದ ಸಂಬಂಧ ಪ್ರಕರಣ ದಾಖಲಿಸಿಕೊಂಡು ಬಸ್ ಗಳನ್ನು ಜಪ್ತಿ ಮಾಡಿದ್ದಾರೆ.

ಶಾಲಾ ವಾಹನ ಚಾಲಕರು ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಪೊಲೀಸರು ಈ ಕ್ರಮಕೈಗೊಂಡಿದ್ದಾರೆ.

ಮಂಗಳವಾರ ಬೆಳಗ್ಗೆ 7 ಗಂಟೆಯಿಂದ 9:30 ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು ಒಟ್ಟು 3,016 ವಾಹನಗಳ ತಪಾಸಣೆ ನಡೆಸಿದ್ದಾರೆ. ಈ ಪೈಕಿ 23 ಬಸ್‌ಗಳ ಚಾಲಕರು ಮದ್ಯ ಸೇವಿಸಿ ವಾಹನ ಚಾಲನೆ ಮಾಡಿರುವುದು ಮದ್ಯ ಸೇವನಾ ಪರೀಕ್ಷಾ ಯಂತ್ರದಲ್ಲಿ ಪತ್ತೆಯಾಗಿದೆ.

ಈ 23 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಅವರ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲು ಆರ್‌ ಟಿಓ ಕಚೇರಿಗೆ ಪತ್ರ ಬರೆಯಲಾಗಿದೆ. ಜತೆಗೆ ವಾಹನಗಳ ಜಪ್ತಿ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ಇದರೊಂದಿಗೆ ತಪಾಸಣೆ ವೇಳೆ ವಾಹನಗಳ ಸಾಮಾರ್ಥ್ಯ ಪ್ರಮಾಣ ಪತ್ರ(ಫಿಟ್ನೆಸ್‌ ಸರ್ಟಿಫಿಕೆಟ್‌) ಹೊಂದಿರದ 11 ವಾಹನಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಜಪ್ತಿ ಮಾಡಿ, ಆರ್‌ ಟಿಓ ಅಧಿಕಾರಿಗಳ ವಶಕ್ಕೆ ನೀಡಲಾಯಿತು. ಮುಂದಿನ ದಿನಗಳಲ್ಲಿಯೂ ಈ ವಿಶೇಷ ಕಾರ್ಯಾಚರಣೆಯನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಸಂಚಾರ ವಿಭಾಗದ ಪೊಲೀಸರು ಮಾಹಿತಿ ನೀಡಿದರು.

ಶಾಲೆಗಳ ಆಡಳಿತ ಮಂಡಳಿಯ ವೈಫಲ್ಯ:

ಶಾಲಾ ಬಸ್ ಶುಲ್ಕ ಅಂತ ಶಾಲಾ ಆಡಳಿತ ಮಂಡಳಿ ಪೋಷಕರಿಂದ ವಸೂಲಿ ಮಾಡುತ್ತವೆ. ಆದರೆ, ಬಸ್ ನ ನಿರ್ವಹಣೆ ಮತ್ತು ವಿದ್ಯಾರ್ಥಿಗಳ ಸುರಕ್ಷತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಚಾಲಕರ ಪೂರ್ವಾಪರ ತಿಳಿಯದೇ ನೇಮಕ ಮಾಡಿಕೊಂಡು ಮಕ್ಕಳ ಜೀವದಲ್ಲಿ ಚೆಲ್ಲಾಟವಾಡುತ್ತಿದೆ.  ಕೇವಲ ಡ್ರೈವರ್ ಗಳು ಮಾತ್ರವಲ್ಲ, ಅವರನ್ನು ನೇಮಿಸಿದವರ ವಿರುದ್ಧ ಕೂಡ ಪೊಲೀಸರು ಕ್ರಮಕೈಗೊಳ್ಳಬೇಕು. ಆಗ ಮಾತ್ರವೇ ಇಂತಹ ಪ್ರಕರಣಕ್ಕೆ ಕಡಿವಾಣ ಸಾಧ್ಯ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ