ಚಿನ್ನ, ವಜ್ರಾಭರಣ ಕಳವು ಪ್ರಕರಣ: ಕ್ಯಾಬ್ ಚಾಲಕ ಅರೆಸ್ಟ್

ಬೆಂಗಳೂರು: ಚಿನ್ನಾಭರಣ ಹಾಗೂ ವಜ್ರದ ಆಭರಣಗಳನ್ನು ಕಳವು ಮಾಡಿದ್ದ ಖಾಸಗಿ ಕ್ಯಾಬ್ ಚಾಲಕನನ್ನು ಈಶಾನ್ಯ ವಿಭಾಗದ ಯಲಹಂಕ ಉಪನಗರ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು 30 ಲಕ್ಷ ರೂ ಮೌಲ್ಯದ ಆಭರಣ ವಶಪಡಿಸಿಕೊಂಡಿದ್ದಾರೆ.
ಸಂಬಂಧಿಕರ ಮದುವೆಗೆಂದು ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದವರ ಸೂಟ್ ಕೇಸ್ ನಲ್ಲಿದ್ದ ಚಿನ್ನಾಭರಣ ಮತ್ತು ವಜ್ರದ ಒಡವೆಗಳು ಕಳ್ಳತನವಾಗಿರುವ ಬಗ್ಗೆ, ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಆರಂಭಿಸಿದ ಯಲಹಂಕ ಉಪನಗರ ಪೊಲೀಸರು ದೂರುದಾರರು ಹೊಟೇಲ್ ನಿಂದ ಮದುವೆಗೆ ಓಡಾಡಲು ಬಾಡಿಗೆಗೆ ಪಡೆದಿದ್ದ ಕಾರ್ ಚಾಲಕನನ್ನು ಬಂಧಿಸಿ, ಕಳುವಾಗಿದ್ದ ಸುಮಾರು 30,00,000/- ರೂ ಮೌಲ್ಯದ 485 ಗ್ರಾಂ ಚಿನ್ನಾಭರಣ ಹಾಗೂ 17.5 ಕ್ಯಾರೆಟ್ ತೂಕದ ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ದೂರುದಾರರು ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಅವರು ತಂಗಿದ್ದ ಹೋಟೆಲ್ ರೂಂ ಖಾಲಿ ಮಾಡಿಕೊಂಡು ಹೊರಡುವ ಸಂದರ್ಭದಲ್ಲಿ, ಒಡವೆಗಳಿದ್ದ ಸೂಟ್ ಕೇಸ್ ನ್ನು ಕಾರಿನಲ್ಲಿರಿಸಿ, ರೂಂ ಕೀ ಹಿಂದಿರುಗಿಸಿ ಬರಲು ತೆರಳಿದ್ದಾಗ ಕಾರ್ ಚಾಲಕ ಒಡವೆಗಳನ್ನು ಸೂಟ್ ಕೇಸ್ ನಿಂದ ಕಳವು ಮಾಡಿರುವುದಾಗಿ ತನಿಖೆಯಿಂದ ತಿಳಿದುಬಂದಿರುತ್ತದೆ, ತನಿಖೆ ಮುಂದುವರೆದಿರುತ್ತದೆ.
ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಬಿ.ಎಮ್. ಲಕ್ಷ್ಮೀ ಪ್ರಸಾದ್ ಮಾರ್ಗದರ್ಶನದಲ್ಲಿ, ಯಲಹಂಕ ವಿಭಾಗದ ಆಯುಕ್ತ ನೇತೃತ್ವದಲ್ಲಿ ಉಪನಗರ ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು,ಬಿ., ಹಾಗೂ ಸಿಬ್ಬಂದಿಯವರ ತಂಡ ಪ್ರಕರಣವನ್ನು ಬೇಧಿಸಲು ಯಶಸ್ವಿಯಾಗಿದ್ದಾರೆ.