ಜಾನುವಾರು ಹತ್ಯೆ ಪ್ರಕರಣ:  ಅಸ್ಸಾಂ ಮೂಲದ 6 ಮಂದಿ ಬಂಧನ - Mahanayaka

ಜಾನುವಾರು ಹತ್ಯೆ ಪ್ರಕರಣ:  ಅಸ್ಸಾಂ ಮೂಲದ 6 ಮಂದಿ ಬಂಧನ

chikkamagaluru
10/07/2025


Provided by

ಕೊಟ್ಟಿಗೆಹಾರ:  ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಕಲ್ ಎಸ್ಟೇಟ್‌ ನ ತೋಟದಲ್ಲಿ ಜಾನುವಾರು ಹತ್ಯೆ ಪ್ರಕರಣ ನಡೆದಿದೆ.

ಅಸ್ಸಾಂ ಮೂಲದ 6 ಕೂಲಿ ಕಾರ್ಮಿಕರು ಜಾನುವಾರು (ಹಸು) ಯನ್ನು ಹತ್ಯೆ ಮಾಡಿ ಮಾಂಸ ಮಾಡಿಕೊಂಡಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2025ರ ಜುಲೈ 9ರ ಮಧ್ಯಾಹ್ನ 3:30ರಿಂದ ಸಂಜೆ 7:30ರ ವೇಳೆಗೆ ಮರ್ಕಲ್ ಎಸ್ಟೇಟ್‌ ನೊಳಗೆ ಘಟನೆ ಸಂಭವಿಸಿದೆ. ಬಾಳೂರು ಠಾಣೆಯ ಪಿಎಸ್‌ ಐ ದಿಲೀಪ್ ಕುಮಾರ್ ವಿ.ಟಿ. ಅವರು ಸ್ವಯಂ ಪಿರ್ಯಾದಿ ಆಗಿ, ತೋಟದೊಳಗೆ ಜಾನುವಾರು ಹತ್ಯೆ ನಡೆದಿರುವ ಬಗ್ಗೆ ಬಾಳೂರು ಠಾಣೆಯಲ್ಲಿ ರಾತ್ರಿ 9:50ಕ್ಕೆ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಜಾನುವಾರು ಹತ್ಯೆ ಮಾಡಿರುವ ಸ್ಥಿತಿ ಹಾಗೂ ಮಾಂಸದ ತುಂಡುಗಳು ಬಾಳೆ ಎಲೆಗಳ ಮೇಲೆ ಇರಿಸಿಕೊಂಡಿರುವುದು ಕಂಡು ಬಂದಿದೆ. ಜಾನುವಾರುವಿನ ಅಂಗಾಂಗಗಳನ್ನು ಮಣ್ಣಡಿ ಹಾಕಲು ಗುಂಡಿ ತೋಡಲಾಗಿತ್ತು. ಸ್ಥಳದಲ್ಲಿ ಯಾರೂ ಕಂಡು ಬಂದಿಲ್ಲ.

ಸ್ಥಳದಲ್ಲಿ  ಜಾನುವಾರುವಿನ ತಲೆ, ಕಾಲುಗಳು, ಪೂರ್ಣ ಚರ್ಮ, ಲಿವರ್ ಮತ್ತು ಇತರ ಅಂಗಾಂಗಗಳು ಪತ್ತೆಯಾಗಿದೆ.  ಅಂದಾಜು 25 ಕೆ.ಜಿ ಮಾಂಸ ಹಾಗೂ 20 ಕೆ.ಜಿ ಪಕ್ಕೆಲುಬು ಮಾಂಸವಿದೆ.  ಮರದ ತುಂಡು ಮತ್ತು ಗುಂಡಿ ತೋಡಲು ಬಳಸಿದ ಗುದ್ದಲಿ ಜಪ್ತಿ ಮಾಡಲಾಗಿದೆ. ಹತ್ಯೆ ಬಳಿಕ ಭಾಗಶಃ ಅಂಗಾಂಗಗಳನ್ನು ಗುಂಡಿಗೆ ಹಾಕಿ ಮಣ್ಣಿನಲ್ಲಿ ಮುಚ್ಚಿರುವುದು ಕಂಡು ಬಂದಿದೆ.

ರೈಟರ್ ಅಭಿಲಾಷ್ ನೀಡಿದ ಮಾಹಿತಿ:

ಎಸ್ಟೇಟ್ ರೈಟರ್ ಅಭಿಲಾಷ್ ಎಂಬವರು, “ನಮ್ಮ ತೋಟದಲ್ಲಿ ಸುಮಾರು 15 ಅಸ್ಸಾಂ ಮೂಲದ ಕಾರ್ಮಿಕರು ಮತ್ತು ಅವರ ಕುಟುಂಬವಿದೆ. ಅವರಲ್ಲಿ ಕೆಲವರು ಮದ್ಯಾಹ್ನ 3:30 ನಂತರ ತೋಟದೊಳಗೆ ಓಡಾಡುತ್ತಿರುವುದು ಕಂಡುಬಂದಿತ್ತು. ಸೌದೆಗಾಗಿ ಬಂದಿರಬಹುದು ಎಂದು ನಾನು ಗಮನಿಸಿಲ್ಲ, ದೂರದಿಂದ ನೋಡಿದ್ದುದು ಯಾರೋ ಎಂದು ಖಚಿತವಾಗಿ ಗುರುತಿಸಲು ಸಾಧ್ಯವಾಗಲಿಲ್ಲ,” ಎಂದು ತಿಳಿಸಿದ್ದಾರೆ.

ಬಂಧಿತ ಆರೋಪಿಗಳ ವಿವರ:

ಬಳಿಕ ಪೊಲೀಸರು ತನಿಖೆ ನಡೆಸಿ ಮರ್ಕಲ್ ಎಸ್ಟೇಟ್‌ನ 6 ಅಸ್ಸಾಂ ಮೂಲದ ಕಾರ್ಮಿಕರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು  ಅಜೀರ್ ಅಲೀ ಬಿನ್ ಅಲೀ ಹುಸೇನ್ (29), ಮೂಲ: ಬಿಸ್ಮಾಲಿ ಗ್ರಾ. ಸುಪಾರ್‌ ಪಾರಾ, ಜಿಲ್ಲೆ ದರಾಂಗ್, ಅಸ್ಸಾಂ,  ಅಕ್ಬರ್ ಅಲಿ ಬಿನ್ ಅಕ್ಬರ್ ಅಲಿ (43), ಮೂಲ: ಬಿಸ್ಮಾಲಿ ಗ್ರಾ., ತಾಂಲಾ, ದರಾಂಗ್ ಜಿಲ್ಲೆ, ಅಸ್ಸಾಂ, ನಜ್ಮುಲ್ ಹಕ್ ಬಿನ್ ಅಬ್ಬಾಸ್ ಮನ್‌ಸೂರ್ (25), ಮೂಲ: ಮೌಲಾನಾ ವಾರ್ ಗ್ರಾ., ದರಾಂಗ್ ಜಿಲ್ಲೆ, ಅಸ್ಸಾಂ, 4. ಇಜಾಹುಲ್ ಹಕ್ ಬಿನ್ ಶೇರಮದ್ದಿನ (23),  ಮೂಲ: ಜಂಗಿಪರ್ ಗ್ರಾ., ಕಚ್ಚಾತೀರ ಹೋಬಳಿ, ದರಾಂಗ್ ಜಿಲ್ಲೆ, ಅಸ್ಸಾಂ,  ಮೋಜೆರ್ ಅಲಿ ಬಿನ್ ಅಬ್ದುಲ್ ಲತೀಫ್ (31),  ಮೂಲ: ಬಿಸ್ಮಾಲಿ ಗ್ರಾ., ದರಾಂಗ್ ಜಿಲ್ಲೆ, ಅಸ್ಸಾಂ,  ಮಂಜುಲ್ ಹಕ್ ಬಿನ್ ಅಬ್ಬಾಸ್ ಮನ್‌ಸೂರ್ (31),  ಮೂಲ: ಮೌಲಾನಾ ವಾರ್ ಗ್ರಾ., ದರಾಂಗ್ ಜಿಲ್ಲೆ, ಅಸ್ಸಾಂ ಎಂದು ಗುರುತಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2) ಮತ್ತು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ 2020ರ ಕಲಂ 12(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಪೊಲೀಸರು ಮುಂದಾಗಿದ್ದಾರೆ. ಜಾನುವಾರು ಅಂಗಾಂಗಗಳನ್ನು ಪಶು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಉಪ ವಿಭಾಗದ ದಂಡಾಧಿಕಾರಿಗಳ ಅನುಮತಿ ಪಡೆದು ಅಂಗಾಂಗಗಳನ್ನು ನಾಶಪಡಿಸಲು ಕ್ರಮವಹಿಸಲಾಗುವುದು ಎಂದು ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ