ಅಪರಿಚಿತ ಪ್ರಾಣಿ ದಾಳಿಗೆ ಮಗು ಬಲಿ: ಮೃತದೇಹ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ - Mahanayaka

ಅಪರಿಚಿತ ಪ್ರಾಣಿ ದಾಳಿಗೆ ಮಗು ಬಲಿ: ಮೃತದೇಹ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

chamrarajanagara
24/08/2023


Provided by

ಚಾಮರಾಜನಗರ: ಅಪರಿಚಿತ ಪ್ರಾಣಿಯೊಂದರ ದಾಳಿಗೊಳಗಾಗಿ ಬಾಲಕಿ ಮೃತಪಟ್ಟಿರುವ ಘಟನೆ ಯಳಂದೂರು ತಾಲೂಕಿನ ಯರಿಯೂರು ಗ್ರಾಮದಲ್ಲಿ ನಡೆದಿದೆ.‌ 3 ವರ್ಷದ ಬಾಲಕಿ ರುಕ್ಮಿಣಿ ಮೃತ ದುರ್ದೈವಿ.

ಕಳೆದ 15 ದಿನಗಳ ಹಿಂದೆ ತೋಟದಲ್ಲಿ ರುಕ್ಮಿಣಿ ಆಟವಾಡುವ ವೇಳೆ ಅಪರಿಚಿತ ವನ್ಯ ಪ್ರಾಣಿಯೊಂದು ದಾಳಿ ನಡೆಸಿ ತಲೆ ಭಾಗವನ್ನು ಕಚ್ಚಿ ಪರಾರಿಯಾಗಿತ್ತು.‌ ತೀವ್ರವಾಗಿ ಗಾಯಗೊಂಡಿದ್ದ ರುಕ್ಮಿಣಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ತಡರಾತ್ರಿ ಅಸುನೀಗಿತ್ತು.

ಘಟನೆ ನಡೆದರೂ ಅರಣ್ಯ ಇಲಾಖೆ ಭೇಟಿ ಕೊಡಲಿಲ್ಲ, ಆಸ್ಪತ್ರೆಗೂ ಬರಲಿಲ್ಲ ಎಂದು ಆಕ್ರೋಶಗೊಂಡ ಕುಟುಂಬ ಇಂದು ಯಳಂದೂರು ವಲಯ ಅರಣ್ಯ ಕಚೇರಿ ಮುಂದೆ ಮಗು ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬಿಆರ್ ಟಿ ಡಿಸಿಎಫ್ ಬರಬೇಕೆಂದು ಪಟ್ಟು ಹಿಡಿದಿದ್ದಾರೆ.

ಸೌಜನ್ಯಕ್ಕೂ ಅರಣ್ಯ ಇಲಾಖೆ ಸಿಬ್ಬಂದಿ ಬಾಲಕಿ ಆರೋಗ್ಯ ವಿಚಾರಿಸಿಲ್ಲ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಸ್ಥಳೀಯ ಜನಪ್ರತಿನಿಧಿಗಳು, ಡಿಸಿಎಫ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಿದ್ದು ಸದ್ಯ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಇತ್ತೀಚಿನ ಸುದ್ದಿ