ಯುವತಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿ ಬರ್ಬರ ಹತ್ಯೆ: ಆರೋಪಿಗಾಗಿ ಪೊಲೀಸರಿಂದ ಶೋಧ - Mahanayaka

ಯುವತಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿ ಬರ್ಬರ ಹತ್ಯೆ: ಆರೋಪಿಗಾಗಿ ಪೊಲೀಸರಿಂದ ಶೋಧ

crime
07/10/2023

ಚಿತ್ರದುರ್ಗ: ದುಷ್ಕರ್ಮಿಯೋರ್ವ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಪರಿಣಾಮವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ನಡೆದಿದೆ.

19 ವರ್ಷ ವಯಸ್ಸಿನ ಸಂತ್ರಸ್ತ ಯುವತಿ ಅತ್ಯಾಚಾರ, ಹತ್ಯೆಯಾದ ಯುವತಿಯಾಗಿದ್ದಾಳೆ. ಅಜಯ್ ಎಂಬಾತ ಈ ದುಷ್ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.

ಅಕ್ಟೋಬರ್ 3ರಂದು ಆರೋಪಿ ಹುಲ್ಲೂರು ಗ್ರಾಮದ ನಿವಾಸಿಯಾಗಿರುವ ಅಜಯ್ ಹಾಗೂ ಆಟೋ ಚಾಲಕ  ಯುವತಿಯನ್ನು ಅಪಹರಿಸಿದ್ದನು. ಅತ್ಯಾಚಾರ ನಡೆಸಿದ ಬಳಿಕ ಯುವತಿಯ ಮೇಲೆ ಅಜಯ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದನು. ಬಳಿಕ ಆಕೆ ಗಂಭೀರವಾಗಿ ಗಾಯಗೊಂಡಿರುವುದನ್ನು ಕಂಡು ಆಸ್ಪತ್ರೆಗೆ ದಾಖಲಿಸಿ ಸ್ಥಳದಿಂದ ಪರಾರಿಯಾಗಿದ್ದ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಗೆ ಯುವತಿಯ ಪೋಷಕರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಅಜಯ್ ಸಂತ್ರಸ್ತ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ, ಯುವತಿ ಪ್ರೀತಿಯನ್ನು ತಿರಸ್ಕರಿಸಿದ್ದರಿಂದ ಸೇಡು ತೀರಿಸಿಕೊಳ್ಳಲು ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆಯ ಬಳಿಕ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ.

ಇತ್ತೀಚಿನ ಸುದ್ದಿ