ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಗೆ ತೆರಳಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಹೃದಯ ಸಂಬಂಧಿ ಸಮಸ್ಯೆ ಮೊಣಕಾಲು ನೋವಿನ ಚಿಕಿತ್ಸೆಗಾಗಿ ಬೊಮ್ಮಾಯಿ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಿ ಪರೀಕ್ಷಿಸಿದ ಆಸ್ಪತ್ರೆ ವೈದ್ಯರು ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದರು.
ಈ ಸಂಬಂಧ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಬೊಮ್ಮಾಯಿ, ನನಗೆ ಲಘು ಶಸ್ತ್ರ ಚಿಕಿತ್ಸೆಯಾಗಿದ್ದು, ವೈದ್ಯರ ಸಲಹೆ ಮೇರೆಗೆ ಈಗ ಸಂಪೂರ್ಣ ವಿಶ್ರಾಂತಿ ಪಡೆಯುತ್ತಿದ್ದೇನೆ. ಆದಷ್ಟು ಬೇಗ ಸಂಪೂರ್ಣ ಗುಣಮುಖನಾಗಿ ನಿಮ್ಮ ಮುಂದೆ ಬರಲು ಕಾತುರದಿಂದ ಕಾಯುತ್ತಿದ್ದೇನೆ. ಸದ್ಯ ಆಸ್ಪತ್ರೆಯಲ್ಲಿರುವ ಕಾರಣ, ನೀವೆಲ್ಲರೂ ಆಸ್ಪತ್ರೆಗೆ ನನ್ನನ್ನು ನೋಡಲು ಬಂದರೆ ಆಸ್ಪತ್ರೆಯಲ್ಲಿರುವ ಇತರ ರೋಗಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ನೀವ್ಯಾರು ಆಸ್ಪತ್ರೆಗೆ ಬರಬಾರದೆಂದು ಕಳಕಳಿಯಾಗಿ ಮನವಿ ಮಾಡುತ್ತೇನೆ ಎಂದಿದ್ದರು.
ಇಂದು ಮಾಜಿ ಮುಖ್ಯಮಂತ್ರಿಗಳನ್ನು ಹಾಲಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ.