ಮಂಗನ ಕಾಟಕ್ಕೆ ನಿದ್ದೆಗೆಟ್ಟ ಕಾಫಿ ಬೆಳೆಗಾರರು: ಬಂಪರ್ ಬೆಲೆಯ ನಡುವೆಯೂ ಆತಂಕದಲ್ಲಿ ಬೆಳೆಗಾರರು - Mahanayaka
12:52 PM Friday 28 - November 2025

ಮಂಗನ ಕಾಟಕ್ಕೆ ನಿದ್ದೆಗೆಟ್ಟ ಕಾಫಿ ಬೆಳೆಗಾರರು: ಬಂಪರ್ ಬೆಲೆಯ ನಡುವೆಯೂ ಆತಂಕದಲ್ಲಿ ಬೆಳೆಗಾರರು

monkey
28/11/2025

ಕೊಟ್ಟಿಗೆಹಾರ: ಈ ಬಾರಿಯ ನಿರಂತರ ಮಳೆ ಮತ್ತು ಅವಧಿಗೂ ಮುನ್ನವೇ ಕಟಾವಿಗೆ ಬಂದಿರುವ ಕಾಫಿ ಹಣ್ಣುಗಳನ್ನು ಮಂಗಗಳು ನಾಶ ಮಾಡುತ್ತಿರುವುದರಿಂದ ಮಲೆನಾಡಿನ ಕಾಫಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಒಂದೆಡೆ ಉತ್ತಮ ಬೆಲೆ ದೊರೆಯುತ್ತಿದ್ದರೂ, ಇಳುವರಿಯನ್ನು ಉಳಿಸಿಕೊಳ್ಳುವುದು ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ. ಪ್ರಸಕ್ತ ವರ್ಷ ಮಲೆನಾಡು ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದರ ಪರಿಣಾಮವಾಗಿ ಕಾಫಿ ಹಣ್ಣುಗಳು ಅವಧಿಗೂ ಮುನ್ನವೇ ಕೊಯ್ಲಿಗೆ ಬಂದಿವೆ.

ಸರಿಯಾದ ಸಮಯಕ್ಕೆ ಕೊಯ್ಲು ಮಾಡದಿದ್ದರೆ ಕಾಫಿ ಹಣ್ಣುಗಳು ಉದುರಿ ಹೋಗುವ ಆತಂಕ ಬೆಳೆಗಾರರನ್ನು ಕಾಡುತ್ತಿದೆ. ಮತ್ತೊಂದೆಡೆ, ಕಾಫಿ ಕೊಯ್ಲು ಮಾಡಲು ಅಗತ್ಯವಿರುವ ಕಾರ್ಮಿಕರ ಕೊರತೆ ತೀವ್ರವಾಗಿದ್ದು, ಬೆಳೆಗಾರರು ಹೈರಾಣಾಗಿದ್ದಾರೆ. ಈ ಎಲ್ಲ ಸಮಸ್ಯೆಗಳ ನಡುವೆ, ತೋಟಗಳಲ್ಲಿ ಕಟಾವಿಗೆ ಬಂದಿರುವ ಕಾಫಿ ಹಣ್ಣುಗಳನ್ನು ಮಂಗಗಳು ಗುಂಪುಗುಂಪಾಗಿ ಬಂದು ತಿಂದು ನಾಶ ಮಾಡುತ್ತಿವೆ. ಮಲೆನಾಡಿನ ಬಹುತೇಕ ಕಾಫಿ ತೋಟಗಳಲ್ಲಿ ಇದೇ ಪರಿಸ್ಥಿತಿ ಕಂಡು ಬರುತ್ತಿದೆ. ಕೆಜಿಗಟ್ಟಲೆ ಕಾಫಿ ಹಣ್ಣುಗಳು ಪ್ರತಿದಿನ ಮಂಗಗಳ ಪಾಲಾಗುತ್ತಿದ್ದು, ಇಳುವರಿ ಭಾರೀ ಪ್ರಮಾಣದಲ್ಲಿ ಕುಸಿಯುವ ಭೀತಿ ಎದುರಾಗಿದೆ. ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕಾಫಿ ಬೆಳೆಗಾರರು ಶ್ರಮಿಸುತ್ತಿದ್ದಾರೆ.

ಮಂಗಗಳನ್ನು ಓಡಿಸಲು ದಿನವಿಡೀ ಪಟಾಕಿಗಳನ್ನು ಸಿಡಿಸುವುದು, ತೋಟದ ಸುತ್ತ ಕಾವಲು ಕಾಯುವಂತಹ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ, ಮಂಗಗಳ ಸಂಖ್ಯೆ ಹೆಚ್ಚಿರುವುದರಿಂದ ಈ ಪ್ರಯತ್ನಗಳು ಅಷ್ಟಾಗಿ ಫಲ ನೀಡುತ್ತಿಲ್ಲ.  ಒಂದೆಡೆ ಕಾಫಿಗೆ ಈ ಬಾರಿಯೂ ಬಂಪರ್ ಬೆಲೆ ದೊರೆಯುವ ನಿರೀಕ್ಷೆ ಇರುವುದರಿಂದ, ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಂಗಗಳಿಗೆ ಆಹಾರವಾಗಲು ಬಿಡಲಾಗದೆ ಬೆಳೆಗಾರರು ಆರ್ಥಿಕ ನಷ್ಟದ ಜೊತೆಗೆ ಮಾನಸಿಕ ಒತ್ತಡವನ್ನೂ ಎದುರಿಸುವಂತಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ