ವಾಣಿಜ್ಯ ಎಲ್‌ ಪಿಜಿ ಸಿಲಿಂಡರ್ ಗಳ ಸ್ಥಗಿತ: ಸಂಕಷ್ಟದಲ್ಲಿ ಹೋಟೆಲ್,  ರೆಸ್ಟೋರೆಂಟ್‌ ಗಳು - Mahanayaka

ವಾಣಿಜ್ಯ ಎಲ್‌ ಪಿಜಿ ಸಿಲಿಂಡರ್ ಗಳ ಸ್ಥಗಿತ: ಸಂಕಷ್ಟದಲ್ಲಿ ಹೋಟೆಲ್,  ರೆಸ್ಟೋರೆಂಟ್‌ ಗಳು

gas
10/03/2026

ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ಪೆಟ್ರೋಲ್ ಮತ್ತು ಅನಿಲ ಸರಬರಾಜಿನ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ದಿಢೀರ್ ವ್ಯತ್ಯಯ ಉಂಟಾಗಿದ್ದು, ನಗರದ ಹಲವಾರು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ತೀವ್ರ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಮಾರ್ಚ್ 9 ರಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ ಗಳ ಪೂರೈಕೆ ಸ್ಥಗಿತಗೊಂಡಿದೆ. ಇದರಿಂದಾಗಿ ಹೋಟೆಲ್ ಮಾಲೀಕರು ತಮ್ಮಲ್ಲಿರುವ ಅಲ್ಪ ಪ್ರಮಾಣದ ಸ್ಟಾಕ್ ಬಳಸಿಕೊಂಡು ಹೇಗೋ ವ್ಯಾಪಾರ ನಡೆಸುತ್ತಿದ್ದಾರೆ.

ಗ್ಯಾಸ್ ಉಳಿಸುವ ನಿಟ್ಟಿನಲ್ಲಿ ಪೂರಿ ಸೇರಿದಂತೆ ಹೆಚ್ಚಿನ ಅನಿಲ ಬಳಸುವ ಖಾದ್ಯಗಳ ತಯಾರಿಕೆಯನ್ನು ಹಲವು ಹೋಟೆಲ್‌ ಗಳು ತಾತ್ಕಾಲಿಕವಾಗಿ ನಿಲ್ಲಿಸಿವೆ.

ಬೆಂಗಳೂರು ಹೋಟೆಲ್‌ಗಳ ಸಂಘದ ಪ್ರಕಾರ, ಗ್ಯಾಸ್ ಸ್ಟಾಕ್ ಖಾಲಿಯಾದ ನಂತರ ಹೋಟೆಲ್‌ಗಳನ್ನು ಮುಚ್ಚುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. “ಕೊನೆಯ ಹನಿ ಗ್ಯಾಸ್ ಇರುವವರೆಗೂ ಅಡುಗೆ ಮಾಡಿ ಬಡಿಸುತ್ತೇವೆ, ಆಮೇಲೆ ಅನಿವಾರ್ಯವಾಗಿ ಮುಚ್ಚಬೇಕಾಗುತ್ತದೆ” ಎಂದು ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ.

ಹೋಟೆಲ್ ಉದ್ಯಮವು ಅತ್ಯಗತ್ಯ ಸೇವೆಯಾಗಿದ್ದು, ಪ್ರತಿನಿತ್ಯ ಹೋಟೆಲ್‌ ಗಳನ್ನೇ ಅವಲಂಬಿಸಿರುವ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಮತ್ತು ವೈದ್ಯಕೀಯ ವೃತ್ತಿಪರರಿಗೆ ಈ ಬಿಕ್ಕಟ್ಟು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಪ್ರಸ್ತುತ ಮದುವೆಗಳ ಸೀಸನ್ ಆಗಿರುವುದರಿಂದ ಈಗಾಗಲೇ ಆರ್ಡರ್ ಪಡೆದಿರುವ ಕ್ಯಾಟರಿಂಗ್ ಸೇವೆಗಳಿಗೂ ಸಂಕಷ್ಟ ಎದುರಾಗಿದೆ.  ತೈಲ ಕಂಪನಿಗಳು ಈ ಹಿಂದೆ 70 ದಿನಗಳವರೆಗೆ ನಿರಂತರ ಅನಿಲ ಪೂರೈಕೆಯ ಭರವಸೆ ನೀಡಿದ್ದವು. ಆದರೆ ಯುದ್ಧದ ಕಾರಣದಿಂದಾಗಿ ಉಂಟಾಗಿರುವ ಈ ಬಿಕ್ಕಟ್ಟನ್ನು ಬಗೆಹರಿಸಲು ಮತ್ತು ನಿಯಮಿತ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಹೋಟೆಲ್ ಉದ್ಯಮಿಗಳು ಒತ್ತಾಯಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ