ವೇಣುಗೋಪಾಲ್ ಹತ್ಯೆ ಹಿಂದೆ ಕಾಂಗ್ರೆಸ್ ಕೈವಾಡ: ಮಹದೇವಪ್ಪ ಮಗ ಸುನೀಲ್ ಬೋಸ್ ಮೇಲೆ ಸೂಲಿಬೆಲೆ ಆರೋಪ
ಬೆಂಗಳೂರು: ವೇಣುಗೋಪಾಲ್ ಹತ್ಯೆ ಹಿಂದೆ ಕಾಂಗ್ರೆಸ್ ಸರ್ಕಾರದ ಕೈವಾಡ ಇದೆ. ಮಹದೇವಪ್ಪ ಮಗ ಸುನೀಲ್‍ಬೋಸ್ ತನ್ನ ಸಹಚರರಿಂದ ಈ ಕೆಲಸ ಮಾಡಿಸಿದ್ದಾರೆ ಎಂದು ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ನೇರವಾಗಿ ಆರೋಪ ಮಾಡಿದ್ದಾರೆ.
ಟಿ ನರಸೀಪುರದಲ್ಲಿ ವೇಣುಗೋಪಾಲ್ ಹತ್ಯೆಯ ಹಿಂದೆ ಸಚಿವ ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಕೈವಾಡವಿದೆ ಎಂದು ವೇಣುಗೋಪಾಲ್ ಮನೆಯವರು, ಸ್ನೇಹಿತರು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ವೇಣುಗೋಪಾಲ್ ಮೃತದೇಹವನ್ನು ನೋಡಲು ತೆರಳಿದ ಮೊದಲ ದಿನವೇ ಟಿ ನರಸಿಪುರದ ಸ್ನೇಹಿತರು ಈ ಕೃತ್ಯವನ್ನು ಸುನಿಲ್ ಬೋಸ್ ಕಡೆಯವರು ಮಾಡಿದ್ದಾರೆ ಎಂದು ಹೇಳಿದ್ದರು. ಆದರೆ ಅಧಿಕೃತ ದಾಖಲೆಗಳು ಇಲ್ಲದೇ ಹೇಳುವುದು ಸರಿಯಲ್ಲ ಎಂದು ನಾನು ಹೇಳಲಿಲ್ಲ. ಆದರೆ ಈಗ ಸುನಿಲ್ ಬೋಸ್ ಜೊತೆಗೆ ಆರೋಪಿಗಳ ಇರುವ ಸಂಬಂಧ, ಫೋಟೋಗಳು ಎಲ್ಲವನ್ನು ನೋಡಿದಾಗ ಇದು ದೃಢವಾಗುತ್ತದೆ. ಹತ್ಯೆ ಮಾಡಿದ ಆರೋಪಿಗಳು ಕಾಂಗ್ರೆಸ್ ಪಕ್ಷ ಕಾರ್ಯಕರ್ತರು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಕಳೆದ ವರ್ಷ ಹನುಮಾನ್ ಜಯಂತಿ ಕಾರ್ಯಕ್ರಮಕ್ಕೆ ಅಡ್ಡಿ ಮಾಡಿದ್ದರೂ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದ್ದರು. ಈ ಬಾರಿಯೂ ಕಾರ್ಯಕ್ರಮಕ್ಕೆ ಅಡ್ಡಿ ಮಾಡಲು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಪುನಿತ್ ಫೋಟೋ ವಿಚಾರಕ್ಕೆ ಗಲಾಟೆ ನಡೆದಿದೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ವೇಣುಗೋಪಾಲ್ ಪುನೀತ್ ಅವರ ಅಭಿಮಾನಿಯಾಗಿದ್ದರು. ಪೊಲೀಸರು ತನಿಖೆಯನ್ನು ಸರಿಯಾಗಿ ನಡೆಸಿದರೆ ಸತ್ಯಾಂಶ ಹೊರ ಬರಬಹುದು.ದಲಿತ ವರ್ಗಕ್ಕೆ ಸೇರಿದ್ದ ವೇಣುಗೋಪಾಲ್ ಆರಂಭದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಯುವ ಬ್ರಿಗೇಡ್ ಸಂಪರ್ಕಕ್ಕೆ ಬಂದ ಬಳಿಕ ತಂಡವನ್ನು ಕಟ್ಟಿ ಕೆರೆ ಸ್ವಚ್ಛಗೊಳಿಸಿ ಬಾಳೆ ಮಂಡಿ ಹಾಕುವ ಮಟ್ಟಕ್ಕೆ ಬೆಳೆದಿದ್ದರು. ಅಷ್ಟೇ ಅಲ್ಲದೇ ತಾಲೂಕಿನ ಯುವ ಬಿಗ್ರೇಡ್ ಸಂಚಾಲಕರಾಗಿದ್ದರು. ವೇಣುಗೋಪಾಲ್ ಬೆಳವಣಿಗೆಯನ್ನು ಸಹಿಸದೇ ಅವರನ್ನು ಸುನಿಲ್ ಬೋಸ್ ಕಡೆಯವರು ಹತ್ಯೆ ಮಾಡಿದ್ದಾರೆ ಎಂದು ದೂರಿದರು.
ಇದೇ ವೇಳೆ ನಗರ ಪಾಲಿಕೆಯ ಬಿಜೆಪಿ ಸದಸ್ಯೆಯ ಸಹೋದರ 4ನೇ ಆರೋಪಿ ಆಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಕೃತ್ಯ ಯಾರೇ ಮಾಡಿದರೂ ಅದು ತಪ್ಪು. ಬಿಜೆಪಿ ಪಕ್ಷದ ಸದಸ್ಯನಾಗಿದ್ದರೆ ಆತನನ್ನು ವಜಾ ಮಾಡಲಿ, ಅದೇ ರೀತಿಯಾಗಿ ಸಂಪುಟದಿಂದ ಮಹದೇವಪ್ಪ ಅವರನ್ನು ಕೈಬಿಡಲಿ. ಈ ಮೂಲಕ ಎಲ್ಲಾ ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಒಂದು ಸಂದೇಶ ಕಳುಹಿಸಲಿ. ಒಂದು ವೇಳೆ ಈಗಲೇ ಕ್ರಮ ಕೈಗೊಳ್ಳದೇ ಇದ್ದರೆ ಮುಂದೆ ಮತ್ತಷ್ಟು ಯುವ ಜನರ ಹತ್ಯೆಯಾಗಬಹುದು. ಮತದಾನಕ್ಕೆ ಹಾಕಿದ ಶಾಯಿ ಇನ್ನೂ ಅಳಿಸಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದು 60 ದಿನ ಆಗಿಲ್ಲ. ಇನ್ನು 60 ತಿಂಗಳಲ್ಲಿ ಎಷ್ಟು ಮಂದಿ ಬಲಿಯಾಗಬೇಕು ಎಂದು ಸೂಲಿಬೆಲೆ ಸಿದ್ದರಾಮಯ್ಯ ಸರ್ಕಾರವನ್ನು ಪ್ರಶ್ನಿಸಿದರು.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/CnfTzNYsUl5CgUXEpffmDp
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























