'ಕೈ' ವಿರುದ್ಧ ನಮೋ ಕೆಂಗಣ್ಣು: ಕಾಂಗ್ರೆಸ್ ಗೋವಿನ ಸೆಗಣಿಯಲ್ಲೂ ಭ್ರಷ್ಟಾಚಾರ ನಡೆಸಿದೆ ಎಂದ ಮೋದಿ - Mahanayaka

‘ಕೈ’ ವಿರುದ್ಧ ನಮೋ ಕೆಂಗಣ್ಣು: ಕಾಂಗ್ರೆಸ್ ಗೋವಿನ ಸೆಗಣಿಯಲ್ಲೂ ಭ್ರಷ್ಟಾಚಾರ ನಡೆಸಿದೆ ಎಂದ ಮೋದಿ

30/09/2023


Provided by

ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದಲ್ಲಿ ನಿರತವಾಗಿದೆ. ಅದು ಗೋವಿನ ಸೆಗಣಿಯಲ್ಲೂ ಭ್ರಷ್ಟಾಚಾರ ನಡೆಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

ಅವರು ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ನಡೆದ ‘ಪರಿವರ್ತನ್ ಮಹಾ ಸಂಕಲ್ಪ್’ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದರು. ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ದೆಹಲಿಯಿಂದ ನಾನು ಎಷ್ಟೇ ಪ್ರಯತ್ನಿಸಿದರೂ, ಇಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಕಾಂಗ್ರೆಸ್ ನಿಮಗೆ ತಲುಪದಂತೆ ನೋಡುತ್ತದೆ ಎಂದು ಆರೋಪಿಸಿದರು.

ಛತ್ತೀಸ್‌ಗಢದಲ್ಲಿ ಬದಲಾವಣೆ ತರಲು ನಾವು ನಿರ್ಧರಿಸಿದ್ದೇವೆ. ಇಲ್ಲಿ ಕಾಣುವ ಸಂಭ್ರಮವೇ ಬದಲಾವಣೆಯ ಘೋಷಣೆ ಎಂದ ಅವರು, ಬಡವರಿಗೆ ಕಾಂಗ್ರೆಸ್‌ ಮಾಡಿದಷ್ಟು ಅನ್ಯಾಯವನ್ನು ಯಾರೂ ಮಾಡಿಲ್ಲ. ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಎಲ್ಲರಿಗೂ ಉಚಿತ ಪಡಿತರ ನೀಡಲು ನಿರ್ಧರಿಸಿದ್ದೆ. ಆದರೆ ಛತ್ತೀಸ್‌ಗಢದ ಕಾಂಗ್ರೆಸ್ ಸರ್ಕಾರ ಅದರಲ್ಲೂ ಭ್ರಷ್ಟಾಚಾರ ಮಾಡಿದೆ ಎಂದು ಆರೋಪಿಸಿದರು.

ನಾನು ನೀಡಿದ್ದ ಭರವಸೆಯನ್ನು ಪೂರ್ಣಗೊಳಿಸಿದ್ದೇನೆ. ಮಹಿಳಾ ಮೀಸಲಾತಿ ಮಸೂದೆ 30 ವರ್ಷಗಳಿಂದ ಬಾಕಿ ಉಳಿದಿತ್ತು. ಈಗ ಅದು ಕಾಯ್ದೆಯಾಗಿ ರೂಪುಗೊಂಡಿದೆ ಎಂದು ತಿಳಿಸಿದರು. ದಲಿತರು, ಪರಿಶಿಷ್ಟ ಪಂಗಡದವರು, ಅಲ್ಪಸಂಖ್ಯಾತರು ಬೆಳೆಯುತ್ತಿರುವುದನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಮೋದಿಯನ್ನು ಗುರಿಯಾಗಿಸಿ ಅಲ್ಪಸಂಖ್ಯಾತರನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಇತ್ತೀಚಿನ ಸುದ್ದಿ