ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ: ಮೋದಿ ಸರ್ಕಾರದ ದಾಳಿ ವಿರುದ್ಧ ಖಂಡನಾ ನಿರ್ಣಯ

ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಈ ಸಭೆಯ ಮೊದಲ ದಿನ ತೆಗೆದುಕೊಂಡ ನಿರ್ಣಯಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ಸಂವಿಧಾನದ ಮೇಲೆ ಮೋದಿ ಸರ್ಕಾರದ ದಾಳಿಯನ್ನು ಖಂಡಿಸಲು ಮತ್ತು ವಿರೋಧಿಸಲು ಎಲ್ಲಾ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಒತ್ತಾಯಿಸುವ ನಿರ್ಣಯವನ್ನು ಈ ಕಾರ್ಯಕಾರಿ ಸಮಿತಿ ಸಭೆಯು ಅಂಗೀಕರಿಸಿತು.
ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಕೂಡಾ ಅಂಗೀಕರಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಎಸ್ ಸಿಗಳು, ಎಸ್ ಟಿಗಳು ಮತ್ತು ಓಬಿಸಿಗಳಿಗೆ ಅಸ್ತಿತ್ವದಲ್ಲಿರುವ ಮೀಸಲಾತಿಗಳ ಮೇಲಿನ ಮಿತಿಯನ್ನು ಹೆಚ್ಚಿಸಲು ಕಾಂಗ್ರೆಸ್ ಆಗ್ರಹಿಸಿದೆ. ದೇಶವನ್ನು ವಿಭಜಕ ರಾಜಕೀಯದಿಂದ ಮುಕ್ತಗೊಳಿಸಲು I.N.D.I.A ಕೈಗೊಳ್ಳುವ ಸೈದ್ಧಾಂತಿಕ ಹೋರಾಟಕ್ಕೆ ಸಂಕಲ್ಪವನ್ನು ತೊಟ್ಟಿದೆ.
ಇನ್ನು ಚುನಾವಣಾ ಆಯುಕ್ತರ ನೇಮಕಾತಿ ಮಸೂದೆಯು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕಿರುವ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ ಎಂದು ಮತ್ತೊಂದು ನಿರ್ಣಯದಲ್ಲಿ ಹೇಳಿದೆ.
ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಮತ್ತು ಜೈರಾಮ್ ರಮೇಶ್ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.