ಕಟ್ಟಡ ಸಾಮಗ್ರಿ ಲಾರಿ, ಟೆಂಪೋ ಮಾಲಕರಿಂದ ಅನಿಧಿಷ್ಟಾವಧಿ ಮುಷ್ಕರ ಆರಂಭ

ಉಡುಪಿ: ಉಡುಪಿ ಜಿಲ್ಲಾ ಕಟ್ಟಡ ಸಾಮಾಗ್ರಿ ಲಾರಿ, ಟೆಂಪೋ ಮಾಲಕರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಇಂದಿನಿಂದ ಉಡುಪಿ ಜಿಲ್ಲೆಯಾದ್ಯಂತ ಅನಿಧಿಷ್ಟಾವಧಿ ಮುಷ್ಕರ ಆರಂಭಿಸಲಾಗಿದೆ.
ಪರವಾನಿಗೆ ರಹಿತವಾಗಿ ಕಟ್ಟಡ ಸಾಮಗ್ರಿ ಸಾಗಾಟ ವಾಹನಗಳ ವಿರುದ್ಧ ಪ್ರಕರಣ ದಾಖಲಿಸುತ್ತಿರುವುದನ್ನು ಖಂಡಿಸಿ ಈ ಮುಷ್ಕರ ಹೂಡಿದ್ದು, ಉಡುಪಿ, ಕಾರ್ಕಳ, ಕುಂದಾಪುರ, ಕೋಟ ಸೇರಿದಂತೆ ವಿವಿಧ ಕಡೆಗಳಲ್ಲಿ ರಸ್ತೆ ಬದಿಯಲ್ಲಿ ನೂರಾರು ವಾಹನಗಳನ್ನು ನಿಲ್ಲಿಸಿ ಕಟ್ಟಡ ಸಾಮಾಗ್ರಿಗಳ ಸಾಗಾಟವನ್ನು ಸ್ಥಗಿತಗೊಳಿಸಿದ್ದಾರೆ.
ಸ್ಥಳದಲ್ಲಿ ಜಮಾಯಿಸಿರುವ ನೂರಾರು ಲಾರಿ ಮತ್ತು ಟೆಂಪೋ ಚಾಲಕರು ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರ ಹಾಗೂ ಇಲಾಖೆಗಳ ತಪ್ಪು ನಿರ್ಧಾರಗಳಿಂದ ನಮ್ಮ ಬಲಿಪಶು ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಮುಷ್ಕರ ಕೈಬಿಡುವುದಿಲ್ಲ ಎಂದು ಒಕ್ಕೂಟದ ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.
ಸೆ.29ರಂದು ಉದ್ಯಾವರ ಬಲಾಯಿಪಾದೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಲ್ನಾಡಿಗೆ ಜಾಥವನ್ನು ಹಮ್ಮಿಕೊಂಡು ಡಿಸಿಗೆ ಮನವಿ ಸಲ್ಲಿಸಲಾಗುತ್ತದೆ. ಮುಂದೆ ಜಿಲ್ಲಾಧಿಕಾರಿ ಕಚೇರಿ ಮುಂದೆ ನ್ಯಾಯ ಸಿಗುವವರೆಗೆ ನಿರಂತರ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ಬಿ.ಬಿ.ಪೂಜಾರಿ, ರಮೇಶ್ ಶೆಟ್ಟಿ, ಮನೋಹರ್ ಕುಂದರ್, ಕೃಷ್ಣ ಅಂಬಲಪಾಡಿ ಮೊದಲಾದವರು ಇದ್ದರು.