ಮತಾಂತರಗೊಂಡ ದಲಿತರಿಗೆ ಪ.ಜಾತಿ ಅಡಿ ಮೀಸಲಾತಿ ಬೇಡ: ಮೀಸಲಾತಿ ಸಂರಕ್ಷಣಾ ಒಕ್ಕೂಟ ನಿರ್ಣಯ

ಚಾಮರಾಜನಗರ: ಕ್ರಿಶ್ವಿಯನ್ ಹಾಗೂ ಮುಸ್ಲಿಂ ಧರ್ಮಗಳಿಗೆ ಮತಾಂತಗೊಂಡಿರುವ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿಯನ್ನು ವಿಸ್ತರಣೆ ಮಾಡುವುದು ಬೇಡ ಎಂಬ ಒಂದು ಅಂಶದ ನಿರ್ಣಯವನ್ನು ಪರಿಶಿಷ್ಟ ಜಾತಿ ಮೀಸಲಾತಿ ಸಂರಕ್ಷಣಾ ಒಕ್ಕೂಟ ಸಭೆಯಲ್ಲಿ ಸರ್ವಾನುಮತದಿಂದ ಕೈಗೊಳ್ಳಲಾಯಿತು.
ಚಾಮರಾಜನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ನಡೆದ ಮುಕ್ತ ಸಂವಾದದಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ, ಮೀಸಲಾತಿ ನೀಡಿದರೆ ಭಾರತೀಯ ಮೂಲ ನಿವಾಸಿಗಳಿಗೆ ಅನ್ಯಾಯವಾಗುತ್ತದೆ. ಸಂವಿಧಾನ ಆಶಯಕ್ಕೆ ವಿರುದ್ದವಾಗುತ್ತದೆ ಹಾಗಾಗಿ ದಲಿತ ಕ್ರೈಸ್ತ, ದಲಿತ ಮುಸ್ಲಿಂರಿಗೆ ಪ.ಜಾತಿಯಡಿ ಮೀಸಲಾತಿ ಕೊಡಬಾರದು ಎಂದು ನಿರ್ಣಯಿಸಿದರು.
ವಿದೇಶಿ ಧರ್ಮಗಳಾದ ಕ್ರಿಶ್ವಿಯನ್ ಹಾಗು ಮುಸ್ಲಿಂ ಧರ್ಮಗಳಿಗೆ ಮತಾಂತರಗೊಂಡವರು ಆ ಧರ್ಮದಿಂದ ದೊರೆಯುವ ಸಲವತ್ತುಗಳನ್ನು ಪಡೆದುಕೊಂಡು ಆರ್ಥಿಕ, ಶೈಕ್ಷಣಿಕವಾಗಿ ಪ್ರಗತಿ ಹೊಂದಿದ್ದಾರೆ. ಇಂಥದವರಿಗೆ ಮತ್ತೇ ಮೀಸಲಾತಿ ಕಲ್ಪಿಸಿದರೆ ಮೂಲ ನಿವಾಸಿಗಳಾದ ನಿಜವಾದ ದಲಿತರಿಗೆ ಅನ್ಯಾಯವಾಗುತ್ತದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಭಾರತೀಯ ಸಂಸ್ಕೃತಿ, ಪರಂಪರೆಗೆ ಪೆಟ್ಟು : ಜಿ.ಪಂ. ಮಾಜಿ ಸದಸ್ಯ ಎಸ್. ಮಹದೇವಯ್ಯ ಸಂವಾದ ಉದ್ಘಾಟಿಸಿ ಮಾತನಾಡಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಮೂಲಕ ಮೀಸಲಾತಿ ಕೊಟ್ಟಿದ್ದಾರೆ. ವಿದೇಶಿ ಧರ್ಮಗಳಾದ ಕ್ರಿಶ್ವಿಯನ್, ಮುಸ್ಲಿಂ ಧರ್ಮಕ್ಕೆ ಹೋದವರಿಗೆ ಮೀಸಲಾತಿ ನೀಡಿದರೆ ಮೀಸಲಾತಿ ಮೂಲ ಸ್ವರೂಪಕ್ಕೆ ಪೆಟ್ಟು ಬೀಳುತ್ತದೆ. ಅಂಬೇಡ್ಕರ್ ಅನುಯಾಯಿಗಳಾದ ನಾವೆಲ್ಲರು ಇದನ್ನು ವಿರೋಧಿಸಬೇಕಾಗಿದೆ. ಪ್ರತಿ ಗ್ರಾಮ, ಹೋಬಳಿ ತಾಲೂಕು ಕೇಂದ್ರಗಳಲ್ಲಿ ಸಭೆಗಳನ್ನು ನಡೆಸಿ, ನಮ್ಮ ಸಮುದಾಯದಲ್ಲಿ ಜಾಗೃತಿ ಮೂಡಿಸಿ, ಆಯೋಗದ ಮುಂದೆ ಸ್ಪಷ್ಟವಾಗಿ ಹೇಳುವ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕೋಣ ಎಂದರು.
ಸಂಜಯಗಾಂಧಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.. ಮೋಹನ್ ಮಾತನಾಡಿ, ಕೇಂದ್ರ ಸರ್ಕಾರ ರಚನೆ ಮಾಡಿರುವ ನಿವೃತ್ತಿ ಮುಖ್ಯ ನ್ಯಾಯಾಧೀಶರಾದ ಕೆ.ಜಿ. ಬಾಲಕೃಷ್ಣನ್ ಅವರ ನೇತೃತ್ವದ ಅಯೊಗದ ಮೂವರ ತಂಡ ರಾಜ್ಯಕ್ಕೆ ಸೆಪ್ಟೆಂಬರ್ ತಿಂಗಳಲ್ಲಿ ಭೇಟಿ ನೀಡಲಿದೆ. ಈ ಸಂದರ್ಭದಲ್ಲಿ ಸಂಘಟನೆಗಳು ಮುಖಂಡರು ಹಾಗೂ ಯಜಮಾನರು ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ತಿಳಿಸುವ ಮೂಲಕ ಅಂಬೇಡ್ಕರ್ ಅವರ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳೊಣ. ನಮ್ಮ ಸಮುದಾಯದ ಜನರು ಇದನ್ನು ಅರ್ಥ ಮಾಡಿಕೊಂಡು ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧರ್ಮದವರ ಹುನ್ನಾರವನ್ನು ಅರಿತು ಕೊಂಡು ಭಾರತವನ್ನು ರಕ್ಷಣೆ ಮಾಡುವ ದಿಕ್ಕಿನಲ್ಲಿ ನಡೆಯೋಣ ಎಂದರು.
ಚಿಂತಕ ವಾದಿರಾಜು ಮಾತನಾಡಿ, ಇದೊಂದು ದೇಶ ವಿರೋಧಿ ಮತ್ತು ಸಂವಿಧಾನ ವಿರೋಧಿ ಕ್ರಮವಾಗಿದೆ. ಕ್ರಿಶ್ಚಿಯನ್, ಮುಸ್ಲಿಂ ಧರ್ಮಗಳಿಗೆ ಮತಾಂತರಗೊಂಡವರಿಗೂ ಮೀಸಲಾತಿ ನೀಡಿದರೆ, ನೂರಾರು ವರ್ಷಗಳಿಂದ ಶೋಷಣೆಗೆ ಒಳಗಾದ ಮೂಲ ನಿವಾಸಿಗಳಾದ ದಲಿತರಿಗೆ ಅನ್ಯಾಯವಾಗುತ್ತದೆ. ಆ ಧರ್ಮದಲ್ಲಿ ಎಲ್ಲ ಸವಲತ್ತು ಸಿಗುತ್ತದೆ ಎಂಬ ಉದ್ದೇಶದಿಂದ ಹೋಗಿರುವವರಿಗೆ ಮತ್ತೇ ಮೀಸಲಾತಿ ನೀಡುವುದರಲ್ಲಿ ಅರ್ಥವಿಲ್ಲ. ಇದರ ಸದುಪಯೋಗಕ್ಕಿಂತ ದುರ್ಬಳಕೆ ಹೆಚ್ಚಾಗುತ್ತದೆ ಎಂದರು.
ಅನೇಕ ವರ್ಷಗಳಿಂದ ದಲಿತ ಕೈಸ್ತರು, ಮುಸ್ಲಿಂರಿಗೆ ಮೀಸಲಾತಿ ನೀಡಿ ಎಂಬ ಷಡ್ಯಂತ್ರ ನಡೆಯುತ್ತಿದೆ. ವ್ಯಾಪಾರಕ್ಕಾಗಿ ನಮ್ಮ ದೇಶಕ್ಕೆ ಬಂದ ಕೈಸ್ತರು, ಮುಸ್ಲಿಂರು ಕ್ರೈಸ್ತ ಮಿಷನರಿಗಳು ನಮ್ಮ ದೇಶದ ಆಡಳಿತ ಚುಕ್ಕಾಣಿಯನ್ನೇ ಹಿಡಿದುಕೊಂಡರು..ಮುಗ್ಧ ಜನರನ್ನು ವಂಚಿಸಿ ನಮ್ಮ ಸಂಪತ್ತುಗಳನ್ನು ದೋಚಿಕೊಂಡು ಹೋದರು, ಕೈಸ್ತ ಧರ್ಮದಲ್ಲಿ ಅಸ್ಪಶ್ಯತೆ ಇಲ್ಲ, ಜಾತಿ ವ್ಯವಸ್ಥೆ ಇಲ್ಲ, ಸೋದರತೆ ಇದೆ, ಸಾಮಾಜಿಕ ಸಮಾನತೆ ಇದೆ ಎಂದು ಸೇರಿಸಿಕೊಂಡುವರನ್ನು ಚರ್ಚಗಳಲ್ಲಿ ಮಾತ್ರ ಕ್ರಿಶ್ಚಿಯನ್‌ರನ್ನಾಗಿ ಮಾಡಿಕೊಂಡಿದ್ದಾರೆ. 2ನೇ ದರ್ಜೆ ಕ್ರೈಸ್ಥರನ್ನಾಗಿಸಿ ಕೊಂಡು ನಿಜವಾದ ಶೋಷಣೆ ಮಾಡುತ್ತಿರುವವರು ಇವೆರಡು ಧರ್ಮಗಳು ಎಂದು ಆರೋಪಿಸಿದರು.
ರಾಜ್ಯಕ್ಕೆ ಆಯೋಗ ಬಂದ ವೇಳೆ ಎಲ್ಲಾ ಸಂಘಟನೆಗಳು ದಲಿತ ಕ್ರೈಸ್ತ, ದಲಿತ ಮುಸ್ಲಿಮರಿಗೆ ಮೀಸಲಾತಿ ವಿಸ್ತರಿಸುವುದು ಬೇಡ ಎಂದು ಒತ್ತಾಯಿಸಬೇಕು, ಮತಾಂತರಗೊಂಡವರ ಆರ್ಥಿಕ ಸ್ಥಿತಿಗತಿಗಳ ಅಧ್ಯಯನದ ವರದಿಯನ್ನು ಆಯೋಗಕ್ಕೆ ಸಲ್ಲಿಸಬೇಕು ಎಂದು ಸಂವಾದದಲ್ಲಿ ಒಕ್ಕೊರಲಿನ ತೀರ್ಮಾನವಾಯಿತು.