ಕೋವಿಡ್-19 ಎರಡನೇ ಅಲೆ ಇಳಿಮುಖಗೊಳ್ಳುತ್ತಿದೆ : ಬಿ.ಎಸ್.ಕಡಕಭಾವಿ
ಮುದ್ದೇಬಿಹಾಳ: ತಾಲೂಕಲ್ಲಿ ಕೋವಿಡ್-19 ಎರಡನೇ ಅಲೆ ಇಳಿಮುಖಗೊಳ್ಳುತ್ತಿದೆ. ಸದ್ಯ ಪರಿಸ್ಥಿತಿ ಅಷ್ಟೊಂದು ಗಂಭೀರವಾಗಿಲ್ಲ. ಇದಕ್ಕಾಗಿ ಶ್ರಮಿಸಿದ ಅಧಿಕಾರಿಗಳು, ಸಿಬ್ಬಂದಿಯನ್ನು ಅಭಿನಂದಿಸುವುದಾಗಿ ನೂತನ ತಹಶೀಲ್ದಾರ್ ಬಿ.ಎಸ್.ಕಡಕಭಾವಿ(ವಿಜಯ್) ಹೇಳಿದರು.
ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಆಸ್ಪತ್ರೆಯಲ್ಲಿ 28 ಆಕ್ಸೀಜನ್ ಬೆಡ್, 3 ವೆಂಟಿಲೇಟರ್ ಬೆಡ್ ಇವೆ. ಸೋಮವಾರ ಕೇವಲ 4 ಜನ ಚಿಕಿತ್ಸೆಗೆ ದಾಖಲಾಗಿದ್ದಾರೆ. ಒಟ್ಟಾರೆ 2660 ಪಾಸಿಟಿವ್ ಕೇಸ್ ಕಂಡುಬಂದಿದ್ದು ಇವರಲ್ಲಿ 2334 ಜನ ಗುಣಮುಖರಾಗಿದ್ದಾರೆ. ಹೋಮ್ ಐಸೋಲೇಶನ್‍ನಲ್ಲಿ 289 ಜನ ಇದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಒಬ್ಬರು, ಖಾಸಗಿ ಆಸ್ಪತ್ರೆಯಲ್ಲಿ 11, ಬೇರೆ ಕಡೆ ಹೋಗಿ ಚಿಕಿತ್ಸೆ ಪಡೆಯುತ್ತಿರುವವರು 17 ಜನ ಇದ್ದಾರೆ. ಒಟ್ಟಾರೆ ಆಕ್ಟಿವ್ ಕೇಸ್ 318 ಇವೆ. 8 ಜನ ಸಾವನ್ನಪ್ಪಿದ್ದಾರೆ ಎಂದರು.
ಇದುವರೆಗೆ 65303 ಜನರ ಆರೋಗ್ಯ ತಪಾಸಣೆ ನಡೆಸಿದ್ದು ಇದರಲ್ಲಿ 7 ಸಾರಿ, 690 ಐಎಲ್ ಈ ಸೇರಿ 697 ಪ್ರಕರಣಗಳು ಪತ್ತೇ ಆಗಿದ್ದವು. ಈ ಪೈಕಿ 66 ಪಾಸಿಟಿವ್ ಇದ್ದು ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ ಎಂದರು. ತಹಶೀಲ್ದಾರ್ ಕಚೇರಿಯನ್ನು ಬಹಳಷ್ಟು ಸುಧಾರಣೆ ಮಾಡಬೇಕಾಗಿದೆ. ಕೋವಿಡ್-19 ಎರಡನೇ ಅಲೆಯ ಪರಿಸ್ಥಿತಿ ನಿಭಾಯಿಸುವ ಕುರಿತು ಮಂಗಳವಾರ ಬೆಳಿಗ್ಗೆ 10-30ಕ್ಕೆ ಕೋವಿಡ್ ನಿಯಂತ್ರಣದಲ್ಲಿ ತೊಡಗಿಸಿಕೊಂಡಿರುವ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಕೆಲವು ಮಹತ್ವದ ತೀರ್ಮಾನ ಕೈಕೊಂಡು ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಲಾಗುತ್ತದೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ ತಿವಾರಿ ಮಾತನಾಡಿ, ಸರ್ಕಾರವು ಮುದ್ದೇಬಿಹಾಳ ತಾಲೂಕು ಸರ್ಕಾರಿ ಆಸ್ಪತ್ರೆಗಳಿಗೆ 7 ಜನ ಫಿಜಿಸಿಯನ್ ವೈದ್ಯರನ್ನು ನಿಯೋಜಿಸುವ ಮೂಲಕ ಬೇಡಿಕೆ ಈಡೇರಿಸಿದೆ. ಅವರು ಶೀಘ್ರ ಇಲ್ಲಿಗೆ ಬಂದು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.




























