ದಾಳಿ: ಫರಿದಾಬಾದ್ ನಲ್ಲಿ ಗೋ ರಕ್ಷಕನ ಸಹೋದರನಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು..! ಬೆಚ್ಚಿಬೀಳಿಸಿದ ಕೃತ್ಯ

ಗೋ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ಬಿಟ್ಟು ಬಜರಂಗಿ ಸಹೋದರ ಮಹೇಶ್ ಪಾಂಚಾಲ್ ಎಂಬುವವರ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಫರಿದಾಬಾದ್ ನಲ್ಲಿ ನಡೆದಿದೆ.
ಗೋ ರಕ್ಷಕ ಬಿಟ್ಟು ಬಜರಂಗಿಯ ಸಹೋದರ ಮಹೇಶ್ ಪಾಂಚಾಲ್ (32) ಅವರಿಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಮಹೇಶ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇಕಡಾ 60ರಷ್ಟು ಭಾಗ ಸುಟ್ಟಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗೋರಕ್ಷಾ ಬಜರಂಗ ದಳದ ರಾಷ್ಟ್ರೀಯ ಅಧ್ಯಕ್ಷ ಬಜರಂಗಿ ಅಲಿಯಾಸ್ ರಾಜ್‌ಕುಮಾರ್ ಅವರು ನೂಹ್ ಹಿಂಸಾಚಾರ ಪ್ರಕರಣದಲ್ಲಿ ಬಂಧನದಲ್ಲಿದ್ದಾರೆ. ಮಹೇಶ್ ಅವರ ಮೇಲೆ ಐವರ ಗುಂಪು ದಾಳಿ ಮಾಡಿದ್ದು, ಫರಿದಾಬಾದ್ ಬಳಿಯ ಬಾಬಾ ಮಂಡಿ ಸಮೀಪ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ಈ ಕುರಿತ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ತೆರಳಿ ಮಹೇಶ್ ಅವರಿಂದ ಘಟನೆ ಬಗ್ಗೆ ವರದಿ ಪಡೆಯಲಾಗಿದೆ. ನಂತರ ಘಟನಾ ಸ್ಥಳದ ಪರಿಶೀಲನೆ ಮಾಡಲಾಗಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.