ರಾವಣನ ಪಾತ್ರಧಾರಿಯ ಕಣ್ಣು ತೆಗೆದ ರಾಮನ ಪಾತ್ರಧಾರಿ: ‘ರಾಮಲೀಲಾ’ ಬದಲು ದ್ವೇಷ, ಜಾತಿ ಅಸೂಯೆ ಪ್ರದರ್ಶನ
ಲಕ್ನೋ: ಉತ್ತರ ಪ್ರದೇಶದ ಸೋನಭದ್ರಾ ಜಿಲ್ಲೆಯಲ್ಲಿ ನಡೆದ ರಾಮಲೀಲಾ ಪ್ರದರ್ಶನದ ವೇಳೆ ಘೋರ ಘಟನೆಯೊಂದು ಸಂಭವಿಸಿದೆ. ರಾಮನ ಪಾತ್ರ ಮಾಡುತ್ತಿದ್ದ ಯುವಕ ಎಸೆದ ಬಾಣ ನೇರವಾಗಿ ತಗುಲಿದ್ದರಿಂದ ರಾವಣನ ಪಾತ್ರ ಮಾಡುತ್ತಿದ್ದ 35 ವರ್ಷದ ದಲಿತ ವ್ಯಕ್ತಿಯೊಬ್ಬರು ತಮ್ಮ ಬಲಗಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ.
ಘಟನೆಯ ವಿವರ: ಕಳೆದ ನವೆಂಬರ್ 13 ರಂದು ರಾಮಲೀಲಾ ಪ್ರದರ್ಶನದ ಕೊನೆಯ ದಿನದಂದು ಈ ಘಟನೆ ನಡೆದಿದೆ. ಸುನೀಲ್ ಕುಮಾರ್ ಎಂಬುವವರು ಕಳೆದ ಎಂಟು ವರ್ಷಗಳಿಂದ ರಾವಣನ ಪಾತ್ರ ಮಾಡುತ್ತಿದ್ದರು. ಈ ಬಾರಿ ನೈತಿಕ್ ಪಾಂಡೆ (22) ಎಂಬ ಯುವಕ ಮೊದಲ ಬಾರಿಗೆ ರಾಮನ ಪಾತ್ರಕ್ಕೆ ಆಯ್ಕೆಯಾಗಿದ್ದನು.
ಉದ್ದೇಶಪೂರ್ವಕ ದಾಳಿ: ರಾಮನ ಪಾತ್ರಧಾರಿ ನೈತಿಕ್ ಕೇವಲ ಒಂದು ಬಾಣ ಪ್ರಯೋಗಿಸಬೇಕಿತ್ತು. ಆದರೆ, ಆತ ರಾವಣನ ಪಾತ್ರಧಾರಿ ದಲಿತ ವ್ಯಕ್ತಿಯ ಮೇಲೆ ಹಗೆತನ ಮತ್ತು ಅಸೂಯೆಯಿಂದ ಕೇವಲ 5 ಅಡಿ ಅಂತರದಿಂದ ಸತತವಾಗಿ ಹಲವು ಬಾಣಗಳನ್ನು ಎಸೆದಿದ್ದಾನೆ. ಅಲ್ಲದೇ ಸಮಿತಿ ನೀಡಿದ್ದ ಬಾಣಗಳನ್ನು ಬಳಸುವ ಬದಲಾಗಿ, ಆತ ತಾನೇ ತಂದಿದ್ದ ಗಟ್ಟಿ ಮರದ, ಹರಿತವಾದ ಬಾಣವನ್ನು ಬಳಸಿದ್ದಾನೆ. ಇದು ಸುನೀಲ್ ಅವರ ಬಲಗಣ್ಣಿಗೆ ಬಲವಾಗಿ ತಗುಲಿದೆ.
ಜಾತಿ ನಿಂದನೆ: ಘಟನೆಯ ನಂತರ ಚಿಕಿತ್ಸಾ ವೆಚ್ಚ ಕೇಳಲು ಹೋದಾಗ, ಸಂಘಟಕ ರಾಮಸ್ನೇಹಿ ಸಿಂಗ್ ಮತ್ತು ನೈತಿಕ್ ಪಾಂಡೆ ಸೇರಿ ಸುನೀಲ್ ಅವರಿಗೆ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಸುನೀಲ್ ಕುಮಾರ್ ಅವರು ಈವರೆಗೆ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಅವರ ಕಣ್ಣಿನ ದೃಷ್ಟಿ ಮರಳಿ ಬಂದಿಲ್ಲ. ನಗರಸಭೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ಈಗ ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದಾರೆ.
ತಡವಾಗಿ ದೂರು ದಾಖಲಾಗಿದ್ದರೂ, ಪೊಲೀಸರು ಈಗ ನೈತಿಕ್ ಪಾಂಡೆ ಮತ್ತು ಸಂಘಟಕ ರಾಮಸ್ನೇಹಿ ಸಿಂಗ್ ವಿರುದ್ಧ ಬಿಎನ್ ಎಸ್ (BNS) ಸೆಕ್ಷನ್ ಗಳು ಮತ್ತು ಎಸ್ ಸಿ/ಎಸ್ ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್ ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























