5 ವರ್ಷಗಳಲ್ಲಿ 60ಕ್ಕಿಂತ ಹೆಚ್ಚು ಪುರುಷರಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ: ದಲಿತ ಯುವತಿಯಿಂದ ಗಂಭೀರ ಆರೋಪ - Mahanayaka
5:53 AM Wednesday 20 - August 2025

5 ವರ್ಷಗಳಲ್ಲಿ 60ಕ್ಕಿಂತ ಹೆಚ್ಚು ಪುರುಷರಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ: ದಲಿತ ಯುವತಿಯಿಂದ ಗಂಭೀರ ಆರೋಪ

11/01/2025


Provided by

ಕಳೆದ ಐದು ವರ್ಷಗಳಲ್ಲಿ 60ಕ್ಕಿಂತ ಹೆಚ್ಚು ಪುರುಷರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಕೇರಳದ ಪತ್ತನಂತಿಟ್ಟದ 18 ವರ್ಷದ ದಲಿತ ಯುವತಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ತನ್ನ 13ನೇ ವಯಸ್ಸಿನಿಂದ ಇದುವರೆಗೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಕ್ರೀಡಾಪಟುವಾಗಿರುವ ಯುವತಿ ಆರೋಪಿಸಿದ್ದಾರೆ. ಈ ಸಂಬಂಧ ಜನವರಿ 10ರಂದು ಶುಕ್ರವಾರ ಪತ್ತನಂತಿಟ್ಟದ ಎಲವುಂತಿಟ್ಟ ಪೊಲೀಸರು ಎರಡು ಎಫ್‌ಐಆರ್‌ ದಾಖಲಿಸಿದ್ದಾರೆ.

ಪ್ರಕರಣಗಳ ತನಿಖೆಯನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ನಂದಕುಮಾರ್ ಮತ್ತು ಇನ್ಸ್‌ಪೆಕ್ಟರ್ ವಿನೋದ್ ಕೃಷ್ಣನ್ ಪ್ರತ್ಯೇಕವಾಗಿ ನಡೆಸಲಿದ್ದಾರೆ.

ಕಾಲೇಜಿನಲ್ಲಿ ಕೌನ್ಸೆಲಿಂಗ್ ನಡೆಸುವ ವೇಳೆ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಪೊಲೀಸರಿಗೆ ಮಾಹಿತಿ ನೀಡಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸುಬಿನ್ (24), ಎಸ್. ಸಂದೀಪ್ (30), ವಿಕೆ ವಿನೀತ್ (30), ಕೆ ಆನಂದು (21), ಮತ್ತು ಶ್ರೀನಿ ಅಲಿಯಾಸ್ ಎಸ್ ಸುಧಿ ಶ್ರೀನಿ (24) ಎಂಬವರನ್ನು ಬಂಧಿಸಿದ್ದಾರೆ. ಇವರೆಲ್ಲರೂ ಪತ್ತನಂತಿಟ್ಟದ ಚೆನ್ನೀರ್ಕರ ನಿವಾಸಿಗಳು ಎಂದು ತಿಳಿದು ಬಂದಿದೆ.

ಪೊಲೀಸರ ಪ್ರಕಾರ, ಹುಡುಗಿಯ ನೆರೆಮನೆಯವನಾದ ಸುಬಿನ್, ಹುಡುಗಿ 13 ವರ್ಷದವಳಿದ್ದಾಗ ಆಕೆಯ ನಗ್ನ ಫೋಟೋಗಳನ್ನು ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ 16ನೇ ವಯಸ್ಸಿನಲ್ಲಿ ಮತ್ತೊಮ್ಮೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅದರ ವಿಡಿಯೋಗಳನ್ನು ರೆಕಾರ್ಡ್ ಮಾಡಿ, ಅವುಗಳನ್ನು ಇತರ ಆರೋಪಿಗಳೊಂದಿಗೆ ಹಂಚಿಕೊಂಡಿದ್ದ. ಆ ವಿಡಿಯೋ ಮುಂದಿಟ್ಟುಕೊಂಡು ಹುಡುಗಿಯನ್ನು ಹೆದರಿಸಿದ್ದ ಆರೋಪಿಗಳು, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು.

ಪೊಲೀಸರ ಪ್ರಾಥಮಿಕ ತನಿಖೆಗಳು ಕನಿಷ್ಠ 60 ಆರೋಪಿಗಳನ್ನು ಗುರುತಿಸಿವೆ. ಇವರಲ್ಲಿ ಯುವತಿಯ ಕೋಚ್ ಮತ್ತು ಸಹ ಕ್ರೀಡಾಪಟುಗಳು ಸೇರಿದ್ದಾರೆ ಎಂದು ವರದಿಗಳು ಹೇಳಿವೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ