ಬೌದ್ಧ ಸಂಪ್ರದಾಯದಂತೆ ಡಾ.ಸಿದ್ದಲಿಂಗಯ್ಯನವರ ಅಂತ್ಯಕ್ರಿಯೆ
12/06/2021
ಬೆಂಗಳೂರು: ಕೊರೊನಾಕ್ಕೆ ಬಲಿಯಾಗಿದ್ದ ಖ್ಯಾತ ಕವಿ, ಸಾಹಿತಿ ಡಾ.ಸಿದ್ದಲಿಂಗಯ್ಯನವರ ಅಂತ್ಯಕ್ರಿಯೆ ಇಂದು ಬೌದ್ಧ ಸಂಪ್ರದಾಯದಂತೆ, ಸಕಲ ಸರ್ಕಾರಿ ಗೌರವಗಳೊಂದಿಗೆ ಕಲಾ ಗ್ರಾಮದಲ್ಲಿ ನೆರವೇರಿಸಲಾಯಿತು.
ಬೌದ್ಧ ಬಿಕ್ಕುಗಳ ನೇತೃತ್ವದಲ್ಲಿ ಡಾ.ಸಿದ್ದಲಿಂಗಯ್ಯನವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕುಟುಂಬಸ್ಥರು ಹಾಗೂ ಸಿದ್ದಲಿಂಗಯ್ಯನವರ ಅಭಿಮಾನಿಗಳ ಸಮ್ಮುಖದಲ್ಲಿ ಇಂದು ಮಧ್ಯಾಹ್ನ ದಮ್ಮಾನುಸಾರವಾಗಿ ವಿಧಿವಿಧಾನಗಳನ್ನು ನಡೆಸಲಾಯಿತು. ಸಿದ್ದಲಿಂಗಯ್ಯನವರ ಮಗ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಸಕಲ ಸರ್ಕಾರಿ ಗೌರವಗಳೊಂದಿಗೆ, ಅಭಿಮಾನಿಗಳ, ಬಂಧುಗಳ ತೀವ್ರ ದುಃಖ, ಕಣ್ಣೀರಿನೊಂದಿಗೆ ಕವಿ ಸಿದ್ದಲಿಂಗಯ್ಯನವರಿಗೆ ಅಂತಿಮ ವಿದಾಯ ಹೇಳಲಾಗಿದೆ. ಅಂತ್ಯಕ್ರಿಯೆಯನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಆರ್.ಆರ್.ನಗರ ಶಾಸಕ ಮುನಿರತ್ನ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.




























